ಮೈಸೂರು: ಮೈಸೂರು, ಹಾಸನ, ಮಂಡ್ಯ, ಹಾಗೂ ಚಾಮರಾಜನಗರಕ್ಕೆ ಕೊರೊನಾ ವೈರಸ್ ನ ದೊಡ್ಡ ಕಂಟಕ ಎದುರಾಗಿದೆ. ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆ ಕಾರ್ಮಿಕನಿಂದ ಹರಡಿದ ಕೊರೊನಾ ಸೋಂಕು ಕಾರ್ಖಾನೆಯ ಬಹುತೇಕ ಕಾರ್ಮಿಕರಿಗೆ ತಗುಲಿರುವ ಬಗ್ಗೆ ಅನುಮಾನಗಳ ವ್ಯಕ್ತವಾಗಿದೆ. ಈ ಕಾರ್ಮಿಕರು ಈ ನಾಲ್ಕು ಜಿಲ್ಲೆಗಳಲ್ಲಿ ಇರುವುದರಿಂದ ಅಪಾಯದ ಗಂಟೆ ಸದ್ದು ನಾಲ್ಕು ಜಿಲ್ಲೆಗಳಲ್ಲಿ ಕೇಳಿಸುತ್ತಿದೆ.
Advertisement
ನಂಜನಗೂಡಿನ ಜ್ಯೂಬಿಲಿಯೆಂಟ್ ಕಾರ್ಖಾನೆ ನೌಕರನಿಗೆ ಕೊರೋನಾ ಪಾಸಿಟಿವ್ ಇತ್ತು. ಆತನಿಂದ ಇತರೆ 5 ಮಂದಿಗೆ ಸೋಂಕು ಹರಡಿತ್ತು. ಈಗ ಮತ್ತೆ ಅದೇ ಕಾರ್ಖಾನೆಯ 4 ಕಾರ್ಮಿಕರಿಗೆ ಸೋಂಕು ಖಚಿತವಾಗಿದೆ. ಅಲ್ಲಿಗೆ ಇದೇ ಕಾರ್ಖಾನೆಯ 10 ಜನರಲ್ಲಿ ಸೋಂಕು ಇದೆ. ಉಳಿದಂತೆ ಇಬ್ಬರು ವಿದೇಶದಿಂದ ಬಂದವರಲ್ಲಿ ಸೋಂಕು ಇದ್ದು ಮೈಸೂರು ಜಿಲ್ಲೆಯಲ್ಲಿ ಒಟ್ಟು ಸೋಂಕು ಪೀಡಿತರ ಸಂಖ್ಯೆ 12ಕ್ಕೆ ಏರಿದೆ.
Advertisement
Advertisement
ನಂಜನಗೂಡಿನ ಔಷಧಿ ಕಂಪನಿ ನೌಕರ ಮತ್ತು ಮೈಸೂರಿನ ಮೂರನೇ ಸೋಂಕಿತನಿಗೆ ಸೋಂಕು ಬಂದಿದ್ದು ಹೇಗೆ ಎಂಬುದನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆಗೆ ಇದುವರೆಗೂ ಸಾಧ್ಯವಾಗಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ. ಇದೇ ನೌಕರನಿಂದ 9 ಮಂದಿಗೆ ಸೋಂಕು ಹರಡಿದೆ. ನಿನ್ನೆ ಕಂಡು ಬಂದ 4 ಪಾಸಿಟಿವ್ ಪ್ರಕರಣಗಳ ವಿವರ ಹೀಗಿದೆ.
Advertisement
ಕೊರೊನಾ ಪ್ರಕರಣ 85 – 32 ವರ್ಷದ ಪುರುಷ
ನಂಜನಗೂಡಿನ ಔಷಧಿ ಕಂಪನಿ ಕಾರ್ಮಿಕ
ಪ್ರಕರಣ 52ರ ಜೊತೆ ಸಂಪರ್ಕ (ಮೈಸೂರಿನಲ್ಲಿ ಚಿಕಿತ್ಸೆ)
ಕೊರೊನಾ ಪ್ರಕರಣ ನಂ.86 – 34 ವರ್ಷದ ಪುರುಷ
ನಂಜನಗೂಡಿನ ಔಷಧಿ ಕಂಪನಿ ಕಾರ್ಮಿಕ
ಪ್ರಕರಣ ನಂ.52ರ ಜೊತೆ ಸಂಪರ್ಕ (ಮೈಸೂರಿನಲ್ಲಿ ಚಿಕಿತ್ಸೆ)
ಕೊರೊನಾ ಪ್ರಕರಣ ನಂ.87 – 21 ವರ್ಷದ ಯುವಕ
ನಂಜನಗೂಡಿನ ಔಷಧಿ ಕಂಪನಿ ಕಾರ್ಮಿಕ
ಪ್ರಕರಣ ನಂ.52ರ ಜೊತೆ ಸಂಪರ್ಕ (ಮೈಸೂರಿನಲ್ಲಿ ಚಿಕಿತ್ಸೆ)
ಕೊರೊನಾ ಪ್ರಕರಣ ನಂ.88 – 24 ವರ್ಷದ ಯುವಕ
ನಂಜನಗೂಡಿನ ಔಷಧಿ ಕಂಪನಿ ಕಾರ್ಮಿಕ
ಪ್ರಕರಣ ನಂ.52ರ ಜೊತೆ ಸಂಪರ್ಕ (ಮೈಸೂರಿನಲ್ಲಿ ಚಿಕಿತ್ಸೆ)
ಕೊರೊನಾಗೆ ದೇಶಕ್ಕೆ ಮೊದಲ ಸಾವಾದ ಕಲಬುರಗಿಯ ವೃದ್ಧ ಎಲ್ಲರಿಗೂ ಭಯ ಮೂಡಿಸಿದ್ದ. ಆದ್ರೆ ಈಗ ಕಲಬುರಗಿ ವೃದ್ಧನಿಗಿಂತ ನಂಜನಗೂಡು ನೌಕರನೇ ಡೇಂಜರ್ ಅನಿಸಲಾರಂಭಿಸಿದೆ. ಯಾಕಂದ್ರೆ ಮೈಸೂರೊಂದರಲ್ಲೇ 12 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಮತ್ತೆ 50 ಮಂದಿಗೆ ಸೋಂಕು ಶಂಕೆ ವ್ಯಕ್ತವಾಗಿದೆ. ಅದರಲ್ಲೂ ಮೈಸೂರು ಭಾಗದ 4 ಜಿಲ್ಲೆಗಳಲ್ಲಿ ಕೊರೊನಾ ಅಪಾಯದ ಸೈರನ್ ಮೊಳಗಲಾರಂಭಿಸಿದೆ.
ನಂಜನಗೂಡು ಔಷಧಿ ಫ್ಯಾಕ್ಟರಿಯಲ್ಲಿ 1,500 ಕಾರ್ಮಿಕರಿದ್ದು ಈ ಕಾರ್ಮಿಕರು ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನದಲ್ಲಿ ನೆಲೆಸಿದ್ದಾರೆ. ಇವರೆಲ್ಲರನ್ನೂ ಆಯಾ ಜಿಲ್ಲೆಗಳಲ್ಲಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಇವರಿಗೆ ಸೋಂಕು ತಗುಲಿರೋ ಸಾಧ್ಯತೆ ಜಾಸ್ತಿ ಇರುವ ಕಾರಣ ಮೈಸೂರು ಸೇರಿದಂತೆ ಸುತ್ತಲಿನ ಮೂರು ಜಿಲ್ಲೆಗಳ ಜನರ ಆತಂಕಕ್ಕೆ ಒಳಗಾಗಿದ್ದಾರೆ. ನಂಜನಗೂಡಿನ ಶಂಕಿತರನ್ನು ತಮ್ಮೂರಿನ ಸರ್ಕಾರಿ ಕಟ್ಟಡಕ್ಕೆ ಶಿಫ್ಟ್ ಮಾಡಬೇಡಿ ಅಂತ ಮಹದೇವ ನಗರ ಗ್ರಾಮಸ್ಥರು ಕಿಡಿಕಾರಿದ್ದಾರೆ. ಮಹದೇವನಗರದಿಂದ 1 ಕಿ.ಮೀ. ದೂರದಲ್ಲಿರೋ ಹಾಸ್ಟೆಲ್‍ಗೆ ಶಂಕಿತರ ಶಿಫ್ಟ್ ಮಾಡಲು ಬಿಡಲ್ಲ ಅಂತ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ನಂಜನಗೂಡು ಪಟ್ಟಣದಲ್ಲೇ ಸೋಂಕಿತರ ಸಂಖ್ಯೆ 6 ಇರುವ ಕಾರಣ ನಂಜನಗೂಡು ಪಟ್ಟಣ ಬಂದ್ ಮಾಡಲಾಗಿದೆ. ಅಲ್ಲದೆ ಹೋಮ್ ಕ್ವಾರಂಟೈನ್ ಒಳಗಾದವನ ಕಣ್ಗಾವಲಿಗೆ 10 ಮನೆಗಳಿಗೆ ಒಬ್ಬರು ಪೊಲೀಸ್ ಪೇದೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ. ಇವರು ಮನೆಯಿಂದ ಹೊರ ಬಾರದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗ್ತಿದೆ. ಅಲ್ಲದೆ ಕೈಗೆ ಸೀಲ್ ಜೊತೆ ಬೆರಳಿಗೆ ಬಣ್ಣ ಹಚ್ಚುವ ಕ್ರಮವನ್ನೂ ಆರಂಭಿಸುತ್ತಿದೆ.
ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಸೋಂಕು ತಗುಲಿದ ಕಾರ್ಖಾನೆಯ ಮೊದಲ ನೌಕರ ಕಥೆ ಮಾತ್ರ ಸ್ಪಷ್ಟವಾಗ್ತಿಲ್ಲ. ಈ ನೌಕರ ವಿದೇಶಕ್ಕೂ ಹೋಗಿಲ್ಲ, ವಿದೇಶದಿಂದ ಬಂದವರ ಸಂಪರ್ಕದಲ್ಲೂ ಇಲ್ಲ. ಆದರೂ ಹೇಗೆ ಸೋಂಕು ಹರಡಿತು ಅನ್ನೋ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಈ ನಡುವೆ ಸೋಂಕು ಪೀಡಿತರ ಸಂಖ್ಯೆ ಬೆಳೆಯುತ್ತಲೆ ಇದೆ. ಇದು ಈಗ ನಾಲ್ಕು ಜಿಲ್ಲೆಗಳ ಆತಂಕಕ್ಕೆ ಕಾರಣವಾಗಿದೆ.