– ಅಂಗಡಿಗಳು ಆಯಾ ದಿನ ಮಾತ್ರ ತೆರೆಯಲು ಅವಕಾಶ
ರಾಯಚೂರು: ಹಸಿರು ವಲಯದಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಿಕೆಗೆ ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲಾಡಳಿತ ತನ್ನದೇಯಾದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಮೂಲಕ ವಿನಾಯಿತಿ ನೀಡುತ್ತಿದೆ.
ಸಾರ್ವಜನಿಕರಿಗೂ ತೊಂದರೆಯಾಗಬಾರದು, ವ್ಯಾಪಾರಿಗಳೂ ಕಷ್ಟ ಅನುಭವಿಸಬಾರದು ಎನ್ನುವ ನಿಟ್ಟಿನಲ್ಲಿ ಕಲರ್ ಕೋಡ್ ಮೂಲಕ ವ್ಯಾಪಾರ ವಹಿವಾಟಿಗೆ ಅನುವು ಮಾಡಿಕೊಟ್ಟಿದೆ. ನಗರದಲ್ಲಿರುವ ಅಂಗಡಿಗಳಿಗೆ ಹಸಿರು, ಹಳದಿ, ಕೆಂಪು ಬಣ್ಣಗಳ ಮೂಲಕ ಗುರುತಿಸಲಾಗಿದೆ. ಎಲ್ಲ ಬಣ್ಣದವರಿಗೂ ಅಂಗಡಿ ತೆರೆಯಲು ದಿನಾಂಕ ನಿಗದಿ ಮಾಡಿದ್ದು, ಆ ದಿನಗಳಲ್ಲಿ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.
ಹಸಿರು ಬಣ್ಣ ಬಳಿದಿರುವ ಅಂಗಡಿಗಳು ಸೋಮವಾರ ಮತ್ತು ಗುರುವಾರ ತೆರೆಯಬೇಕು. ಹಳದಿ ಬಣ್ಣ ಬಳೆದಿರುವ ಅಂಗಡಿಗಳು ಮಂಗಳವಾರ ಮತ್ತು ಶುಕ್ರವಾರ, ಕೆಂಪು ಬಣ್ಣ ಬಳೆದಿರುವ ಅಂಗಡಿಗಳು ಬುಧವಾರ, ಶನಿವಾರ ತೆರೆಯಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಇದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೆ ಗ್ರಾಹಕರು ಮತ್ತು ವ್ಯಾಪಾರಿಗಳಿಗೂ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾಡಳಿತ ಕಲರ್ ಕೋಡ್ ಪ್ರಯತ್ನಕ್ಕೆ ಮುಂದಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಇಲ್ಲದಿದ್ದರೂ ಗಡಿ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಭೀತಿ ಹಿನ್ನೆಲೆ ಲಾಕ್‍ಡೌನ್ ಸಡಿಲಿಕೆಯಲ್ಲೂ ಜಿಲ್ಲಾಡಳಿತ ಹಿಡಿತ ಸಾಧಿಸುವ ನಿರ್ಧಾರ ಕೈಗೊಂಡಿದೆ.