ಚಿಕ್ಕಮಗಳೂರು: ಲಾಕ್‍ಡೌನ್ ಹಿನ್ನೆಲೆ ಕಳೆದೊಂದು ವಾರದಿಂದ ಒಂದೆಡೆ ಕೆಲಸವಿಲ್ಲದೆ, ಮತ್ತೊಂದೆಡೆ ಊಟವೂ ಇಲ್ಲದೆ ಕೂಲಿ ಕಾರ್ಮಿಕರು ಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸರೇ ಸೂರು ನಿರ್ಮಿಸಿಕೊಟ್ಟು, ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
Advertisement
ಕೊರೊನಾ ವೈರಸ್ ಹರಡುವ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆದ ಮೇಲೆ ನಿರಾಶ್ರಿತರು ಹಾಗೂ ಕೂಲಿ ಕಾರ್ಮಿಕರು ಹೊತ್ತಿನ ತುತ್ತಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಅಂದೇ ದುಡಿದು ಅಂದೇ ತಿನ್ನುವ ವಲಸೆ ಕೂಲಿ ಕಾರ್ಮಿಕರ ಸ್ಥಿತಿ ಮತ್ತಷ್ಟು ಶೋಚನಿಯವಾಗಿದೆ. ಹೀಗಾಗಿ ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ, ಕಲ್ಲತ್ತಿಪುರ, ಕೃಷ್ಣಾಪುರ, ತಣಿಗೆಬೈಲು, ಕೆಮ್ಮಣ್ಣುಗುಂಡಿ ಭಾಗದ ಏಸ್ಟೇಟ್‍ಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕೂಲಿ ಕಾರ್ಮಿಕರು ಕೂಡ ಅತಂತ್ರರಾಗಿದ್ದಾರೆ.
Advertisement
Advertisement
ಕಾರ್ಮಿಕರ ನೋವನ್ನ ಅರಿತ ಲಿಂಗದಹಳ್ಳಿ ಪೊಲೀಸರು ಕಾರ್ಮಿಕರಿಗೆ ವಸತಿ ಹಾಗೂ ಆಹಾರ ಪೂರೈಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ತಮ್ಮ ಸಂಬಳದಲ್ಲಿ ಸ್ವಲ್ಪ ಹಣವನ್ನು ಹಾಕಿ ನಿರಾಶ್ರಿತರು ಹಾಗೂ ಕೂಲಿ ಕಾರ್ಮಿಕರಿಗೆ ಕಳೆದ ಒಂದು ವಾರದಿಂದ ಆಹಾರವನ್ನು ತಾವೇ ತಯಾರಿಸಿ, ಕಾರ್ಮಿಕರಿರುವ ಜಾಗಕ್ಕೆ ಹೋಗಿ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ಕೊಡುತ್ತಿದ್ದಾರೆ. ಪೊಲೀಸರ ಈ ಕೆಲಸವನ್ನ ನೋಡಿದ ಸ್ಥಳೀಯರು ಕೂಡ ಇದೀಗ ಪೊಲೀಸರೊಂದಿಗೆ ಕೈ ಜೋಡಿಸಿದ್ದಾರೆ.