ಬೆಂಗಳೂರು: ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವರಿಗಾಗಿ ಮೆಜೆಸ್ಟಿಕ್‍ನಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ಕೆಂಪು ವಲಯದ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಿಗೆ ತೆರಳಬಹುದಾಗಿದೆ. ಭಾನುವಾರದಿಂದ ಬೆಳಗ್ಗೆ 10ರಿಂದ ಬಸ್ ಸಂಚಾರ ಆರಂಭವಾಗಲಿದ್ದು, ಸಂಜೆ 6ರ ವರೆಗೆ ಸಂಚರಿಸಲಿವೆ. ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ವಲಸೆ ಕಾರ್ಮಿಕರು ಹಾಗೂ ಇತರೆ ಪ್ರಯಾಣಿಕರಿಗಾಗಿ ಈ ಬಸ್ ವ್ಯವಸ್ಥೆ ಮಾಡಲಾಗಿದ್ದು, ವೈದ್ಯಕೀಯ ಪರೀಕ್ಷೆಗೊಳಪಟ್ಟು ತಮ್ಮ ಜಿಲ್ಲೆ ಹಾಗೂ ಊರುಗಳಿಗೆ ತೆರಳಬಹುದಾಗಿದೆ.
KSRTC buses will be operating from BMTC bus stand (Majestic) to all districts except Red Zone between 10am to 6pm tomorrow 3-5-2020. #Karnataka_covid_Warriors
— @DIPR_covid19 (@DIPR_COVID19) May 2, 2020
ಲಾಕ್‍ಡೌನ್ ನಿಯಮಗಳನ್ನು ಸಡಿಲ ಮಾಡಿದ ಹಿನ್ನೆಲೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ತಮ್ಮ ಊರು ಹಾಗೂ ಜಿಲ್ಲೆಗಳಿಗೆ ತೆರಳುವ ವಲಸೆ ಕಾರ್ಮಿಕರಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ. ಇದೆಲ್ಲದರ ಮಧ್ಯೆ ಬಸ್ ಪ್ರಯಾಣದ ದರದ ಕುರಿತು ಗೊಂದಲ ಉಂಟಾಗಿತ್ತು. ದುಪ್ಪಟ್ಟು ದರ ತೆಗೆದುಕೊಳ್ಳಲಾಗುತ್ತದೆ ಎಂಬ ವದಂತಿ ಹಬ್ಬಿತ್ತು. ಇದಕ್ಕೂ ಸಹ ಸಿಎಂ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ದುಪ್ಪಟ್ಟು ಹಣ ಪಡೆಯಬೇಡಿ ಎಂದು ತಿಳಿಸಿದ್ದಾರೆ.
ಅಲ್ಲದೆ ಈ ಕುರಿತು ಕೆಎಸ್‍ಆರ್ ಟಿಸಿ ಪ್ರಧಾನ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಮಾತನಾಡಿ, ವಲಸೆ ಕಾರ್ಮಿಕರಿಗೆಂದು ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಲಸೆ ಕಾರ್ಮಿಕರನ್ನು ಹೊರತುಪಡಿಸಿ ವಿದ್ಯಾರ್ಥಿಗಳು, ಬೇರೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಸಾಮಾಜಿಕ ಅಂತರ ಇಲ್ಲದಂತಾಗಿದೆ. ಕೇವಲ 40 ಬಸ್ ಎಂದು ಮೊದಲು ಅಂದಾಜಿಸಿದ್ದೆವು. ಆದರೆ ಇದೀಗ 120 ಬಸ್‍ಗಳು ಹೊರಟಿವೆ ಎಂದು ಮಾಹಿತಿ ನೀಡಿದರು.
ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೂ ಬಸ್ಸುಗಳ ವ್ಯವಸ್ಥೆ ಇದೆ. ಕೇವಲ ವಲಸೆ ಕಾರ್ಮಿಕರಷ್ಟೇ ಬರಬೇಕು, ಎಲ್ಲರೂ ಬಂದರೆ ಬಸ್ಸುಗಳ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ನಾಳೆ 100 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಇಂದಿನಂತೆ ಕಾಂಟ್ರಾಕ್ಟ್ ಬೇಸ್ ಬಸ್ಸುಗಳನ್ನು ಇನ್ನು ಓಡಿಸುವುದಿಲ್ಲ. ಮೆಜೆಸ್ಟಿಕ್‍ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಜಿಲ್ಲಾವಾರು ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬದಲಿಸಲಾಗಿದೆ. 6 ಗಂಟೆಗೆ ಮುಗಿಯಬೇಕಿದ್ದ ಬಸ್ಸುಗಳ ಸಂಚಾರ ಹೆಚ್ಚುಪ್ರಯಾಣಿಕರು ಇರುವುದರಿಂದ 10 ಗಂಟೆಯಾದರೂ ನಿಂತಿಲ್ಲ. ನಾಳೆ ಕಡೆ ದಿನ ವಲಸೆ ಕಾರ್ಮಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಎಂದು ತಿಳಿಸಿದರು.