Connect with us

Dakshina Kannada

ಇಟಲಿ, ಡೆನ್ಮಾರ್ಕ್ ಬಳಿಕ ಕುವೈತ್ ಸಂಪೂರ್ಣ ಬಂದ್

Published

on

– ಖಾಲಿ ಹೊಡೆಯುತ್ತಿದೆ ರಸ್ತೆ, ಬೀಚ್ ಮಾಲ್
– ಮನೆಯಿಂದ ಯಾರೂ ಹೊರಬಾರದಂತೆ ಆದೇಶ
– 60 ದಿನಕ್ಕೆ ಸಮಸ್ಯೆ ಇಲ್ಲ ಎಂದ ಸರ್ಕಾರ

ಮಂಗಳೂರು: ಕೊರೊನಾ ಎಫೆಕ್ಟ್‍ಗೆ ಕುವೈತ್‍ನಲ್ಲಿರುವ ಕರಾವಳಿಗರು ಅತಂತ್ರವಾಗಿದ್ದು, ಸರ್ಕಾರದಿಂದಲೇ ಕೆಲ ಘಟಕಗಳ ಮೂಲಕ ಆಹಾರ ಒದಗಿಸುವುದನ್ನು ಹೊರತು ಪಡಿಸಿದರೆ ಯಾರೂ ಹೊರಗೆ ಬರುವಂತಿಲ್ಲ ಎಂಬ ಆದೇಶ ನೀಡಲಾಗಿದೆ. ಹೀಗಾಗಿ ಕುವೈತ್ ಸಂಪೂರ್ಣ ಸ್ತಬ್ಧವಾಗಿದೆ.

ರಾಜ್ಯದ ಕರಾವಳಿ ಭಾಗದ 30 ಸಾವಿರಕ್ಕೂ ಅಧಿಕ ಮಂದಿ ಕುವೈತ್‍ನಲ್ಲಿದ್ದು ಆತಂಕದಲ್ಲಿದ್ದಾರೆ. ಕುವೈತ್ ನ ರಸ್ತೆ, ಬೀಚ್, ಮಾಲ್ ಗಳು ಮತ್ತು ಏರ್ ಪೋರ್ಟ್ ಗಳು ಜನರಿಲ್ಲದೆ ಖಾಲಿ ಹೊಡೆಯುತ್ತಿದ್ದು, ಇಂದಿನಿಂದ ಬಸ್ ಸಂಚಾರವನ್ನು ಸಹ ಬಂದ್ ಮಾಡಲಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ವಿಮಾನಗಳನ್ನು ಸರ್ಕಾರ ಬಂದ್ ಮಾಡಿದೆ.

ನಾಗರಿಕರು ಮನೆಯಲ್ಲೇ ಇರುವಂತೆ ಕುವೈತ್ ಸರ್ಕಾರ ಆದೇಶ ನೀಡಿದೆ. ಅಗತ್ಯ ಸೇವೆ ನೀಡುವ ಇಲಾಖೆಯನ್ನು ಹೊರತು ಪಡಿಸಿ ಸರ್ಕಾರದ ಎಲ್ಲ ಇಲಾಖೆ, ಬ್ಯಾಂಕ್, ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ.

ಈ ಕುರಿತು ಕನ್ನಡಿಗ ಮೋಹನ್ ದಾಸ್ ಅವರು ವಿಡಿಯೋ ಮೂಲಕ ಅಲ್ಲಿನ ಚಿತ್ರಣವನ್ನು ವಿವರಿಸಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ಫೆಬ್ರವರಿ 24ಕ್ಕೆ ಮಂಗಳೂರಿಗೆ ಹೋಗಿದ್ದೆ, ಮಾ.1ಕ್ಕೆ ಮತ್ತೆ ಕುವೈತ್‍ಗೆ ಮರಳಿದೆ. ಇಲ್ಲಿಗೆ ಬಂದ ಮೇಲೆ ಫೆಬ್ರವರಿ 27ರ ನಂತರ ಕುವೈತ್‍ಗೆ ಬಂದವರು ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು. ಅದರ ಪ್ರಕಾರ ನಾನು ಮೆಡಿಕಲ್ ಚೆಕಪ್‍ಗೆ ಒಳಗಾದೆ. ಈ ವೇಳೆ ಕೊರೊನಾ ವೈರಸ್ ಇರುವ ಕುರಿತು ನೆಗಟಿವ್ ರಿಪೋರ್ಟ್ ಬಂದರೂ 14 ದಿನಗಳ ಕಾಲ ಮನೆಯಲ್ಲೇ ಇರಬೇಕು ಹೊರಗಡೆ ಬರಬಾರದು ಎಂಬ ನಿಯಮವನ್ನು ರೂಪಿಸಲಾಗಿದೆ. ಅದರ ಪ್ರಕಾರ ನಾವು ಮನೆಯಲ್ಲೇ ಇದ್ದೇವೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ.

ಮಾರ್ಚ್ 11ರಂದು ಮತ್ತೆ ಹೊಸ ಕಾನೂನು ತಂದರು, ಎಲ್ಲ ಶಾಲೆಗಳು, ಬ್ಯಾಂಕ್, ಸರ್ಕಾರಿ ಕಚೇರಿಗಳು, ಬಸ್ ಸೇರಿದಂತೆ ಎಲ್ಲ ಸೌಲಭ್ಯವನ್ನು ಬಂದ್ ಮಾಡಿದ್ದಾರೆ. ಕೇವಲ ಎಟಿಎಂಗಳು ಮಾತ್ರ ತೆರೆದಿವೆ. ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಜನರ ಓಡಾಟ ಕಡಿಮೆಯಾಗಿದ್ದರಿಂದ ರೋಗದ ಭೀತಿ ಇರುವುದಿಲ್ಲ. ಜನ ಹೆಚ್ಚು ಪ್ಯಾನಿಕ್ ಆಗಿದ್ದರು, ಈಗ ಎಲ್ಲವೂ ನಾರ್ಮಲ್ ಆಗಿದೆ. ಕೆಲವು ಪ್ರವಾಸಿ ತಾಣಗಳ ಭೇಟಿಯನ್ನು ಸಹ ಪೊಲೀಸರು ನಿರ್ಬಂಧಿಸಿದ್ದಾರೆ. 14 ದಿನದ ಬಳಿಕ ಮತ್ತೆ ಆಸ್ಪತ್ರೆಗೆ ಮತ್ತು ತಪಾಸಣೆಗೆ ಒಳಾಗಗಬೇಕು ಎಂದು ಸರ್ಕಾರ ಆದೇಶಿಸಿದೆ ಎಂದು ತಿಳಿಸಿದರು.

ಜನತೆ ಆಹಾರಕ್ಕೆ ಯಾವುದೇ ಸಮಸ್ಯೆ ಇಲ್ಲ. 60 ದಿನಕ್ಕೆ ಆಗುವಷ್ಟು ಸಂಗ್ರಹ ನಮ್ಮ ಜೊತೆ ಇದೆ ಎಂದು ಕುವೈತ್ ಹೇಳಿಕೊಂಡಿದೆ. ಕುವೈತ್ ನಲ್ಲಿ ಇಲ್ಲಿಯವರಗೆ 100 ಕೇಸ್ ದಾಖಲಾಗಿದೆ. ಆದರೆ ಯಾರೂ ಮೃತಪಟ್ಟಿಲ್ಲ. ಆದರೂ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ದೇಶವನ್ನೇ ಬಂದ್ ಮಾಡಿದೆ.

Click to comment

Leave a Reply

Your email address will not be published. Required fields are marked *