ಬೆಂಗಳೂರು: ಕಲಬುರಗಿಯಲ್ಲಿ ಸಾವನ್ನಪ್ಪಿರುವ ಮಹಮದ್ ಹುಸೇನ್ ಸಿದ್ದಿಕಿ ಕೊರೊನಾ ಶಂಕಿತರು. ಅವರ ಸಾವಿನ ಬಗ್ಗೆ ಇನ್ನು ದೃಢಪಟ್ಟಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ಕಲಬುರಗಿಯಲ್ಲಿ ನಿಧನರಾದ ಶ್ರೀ ಮಹಮದ್ ಹುಸೇನ್ ಸಿದ್ದಿಕಿ, ಕೊವಿಡ್ 19 ಶಂಕಿತರೇ ಹೊರತು ದೃಢಪಟ್ಟಿಲ್ಲ. ನಾಗರಿಕರ ಹಿತದೃಷ್ಟಿಯಿಂದ, ಮೃತರ ಅಂತ್ಯಸಂಸ್ಕಾರಕ್ಕಾಗಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾ ಆರೋಗ್ಯ ಇಲಾಖೆಯು ಕೈಗೊಂಡಿದೆ. ಇದರಲ್ಲಿ ಯಾವುದೇ ಅನಗತ್ಯ ಗೊಂದಲ, ಭಯ ಸೃಷ್ಟಿಸುವುದು ಬೇಡ ಎಂದು ತಿಳಿಸಿದ್ದಾರೆ.
Advertisement
ಕಲಬುರ್ಗಿಯಲ್ಲಿ ನಿಧನರಾದ ಶ್ರೀ ಮಹಮದ್ ಹುಸೇನ್ ಸಿದ್ದಿಕಿ, #COVID19 ಶಂಕಿತರೇ ಹೊರತು ದೃಡಪಟ್ಟಿಲ್ಲ. ನಾಗರಿಕರ ಹಿತದೃಷ್ಟಿಯಿಂದ, ಮೃತರ ಅಂತ್ಯಸಂಸ್ಕಾರಕ್ಕಾಗಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾ ಆರೋಗ್ಯ ಇಲಾಖೆಯು ಕೈಗೊಂಡಿದೆ. ಇದರಲ್ಲಿ ಯಾವುದೇ ಅನಗತ್ಯ ಗೊಂದಲ, ಭಯ ಸೃಷ್ಟಿಸುವುದು ಬೇಡ #CovidUpdate
— B Sriramulu (@sriramulubjp) March 11, 2020
Advertisement
ಯಾರು ಈ ಮಹಮದ್ ಹುಸೇನ್ ಸಿದ್ದಿಕಿ?
ಫೆಬ್ರವರಿ 29ರಂದು ಸೌದಿ ಅರೇಬಿಯಾದಿಂದ ವೃದ್ಧ ಮೊಹ್ಮದ್ ಹುಸೇನ್ ಸಿದ್ದಿಕಿ, ಹೈದರಾಬಾದ್ ಮಾರ್ಗವಾಗಿ ಕಲಬುರಗಿ ನಗರಕ್ಕೆ ಬಂದಿದ್ದರು. ಮಾರ್ಚ್ 5ರಂದು ಸಿದ್ಧಿಕಿ ಅವರಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿಶೇಷ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಸಿದ್ದಿಕಿ ಅವರ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಸಿದ್ದಿಕಿಯವರನ್ನು ಹೈದರಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು.
Advertisement
Advertisement
ಅನುಮಾನಗಳಿಗೆ ಕಾರಣವಾಯ್ತು ಪತ್ರ: ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಹೊರಡಿಸಿರುವ ಜ್ಞಾಪನಾ ಪತ್ರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಹಮದ್ ಹುಸೇನ್ ಸಿದ್ದಿಕಿ (76) ಕೊವಿಡ್-19 (ಕೊರೊನಾ ವೈರಸ್)ನಿಂದ ಮರಣ ಹೊಂದಿರುವ ಪ್ರಯುಕ್ತ ಅಂತ್ಯಕ್ರಿಯೆ ಪ್ರಕ್ರಿಯೆ ಮುಗಿಯವರೆಗೂ ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ| ಶರಣಬಸಪ್ಪ ಕ್ಯಾತನಾಳ ಹಾಗೂ ಅವರ ತಂಡ ಉಸ್ತುವಾರಿ ವಹಿಸಿಕೊಂಡು ಎಲ್ಲ ತರಹದ ಮುಂಜಾಗ್ರತೆ ಹಾಗೂ ನಿಯಂತ್ರಣ ಕೈಗೊಂಡು ವರದಿ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಲಬುರಗಿ ಮತ್ತು ಹೈದರಾಬಾದ್ ಆಸ್ಪತ್ರೆಗಳಲ್ಲಿ ಯಾವ ರೀತಿಯ ಚಿಕಿತ್ಸೆ ನೀಡಲಾಗಿತ್ತು ಎಂಬುದರ ಬಗ್ಗೆ ಮಾಹಿತಿಗಳು ಅಸ್ಪಷ್ಟವಾಗಿವೆ. ಸಿದ್ದಿಕಿಯವರ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಲು ಆರೋಗ್ಯಾಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿನ ಪ್ರಯೋಗಾಲಯದ ಮೆಡಿಕಲ್ ರಿಪೋರ್ಟ್ ಗಾಗಿ ಕಾಯುತ್ತಿದ್ದೇವೆ ಎಂಬ ಮಾತುಗಳು ಆರೋಗ್ಯ ಇಲಾಖೆಯಲ್ಲಿ ಕೇಳಿ ಬರುತ್ತಿವೆ. ಪ್ರಯೋಗಾಲಯದ ವರದಿಗೂ ಮುನ್ನವೇ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಜ್ಞಾಪನಾ ಪತ್ರ ಚರ್ಚೆಗೆ ಗ್ರಾಸವಾಗಿದೆ.