ಹುಬ್ಬಳ್ಳಿ: ಧಾರವಾಡ ಹೊಸಯಲ್ಲಾಪುರದ ನಿವಾಸಿಗೆ ಕೋವಿಡ್-19(ಕೊರೊನಾ ವೈರಸ್) ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ವ್ಯಕ್ತಿ ಎಲ್ಲೆಲ್ಲಿಗೆ ಪ್ರಯಾಣ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಸೋಂಕಿತ ವ್ಯಕ್ತಿಯು ಮಾರ್ಚ್ 11ರಂದು ಆಸ್ಟ್ರೇಲಿಯಾ ದೇಶದ ಪರ್ಥ್ ನಗರದಿಂದ ಪ್ರಯಾಣ ಪ್ರಾರಂಭಿಸಿದ್ದನು. ಇಎ 421 ಎಮಿರೇಟ್ಸ್ ವಿಮಾನದ ಮೂಲಕ ದುಬೈ ತಲುಪಿ, ದುಬೈನಿಂದ ಓಮನ್ ಏರ್‌ಲೈನ್ಸ್ ಮೂಲಕ ಮಧ್ಯಾಹ್ನ 12:35ಕ್ಕೆ ಮಸ್ಕತ್ ನಗರಕ್ಕೆ ತೆರೆಳಿದರು. ಮಾರ್ಚ್ 12ರ ಮಧ್ಯಾಹ್ನ 2:45ಕ್ಕೆ ಮಸ್ಕತ್ ನಗರದಿಂದ ಓಮನ್ ಏರ್‌ಲೈನ್ಸ್ ಮೂಲಕ ಹೊರಟು, ಸಂಜೆ 7 ಗಂಟೆಗೆ ಗೋವಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.
ಗೋವಾ ವಿಮಾನ ನಿಲ್ದಾಣದಿಂದ ಬಾಡಿಗೆ ಸ್ಕೂಟರ್ ಪಡೆದು ಪಣಜಿ ಬಸ್ ನಿಲ್ದಾಣಕ್ಕೆ ಹೋಗಿದ್ದರು. ಮಾರ್ಚ್ 12ರ ರಾತ್ರಿ 8:16ಕ್ಕೆ ವಾಹನ ಸಂಖ್ಯೆ – ಕೆ.ಎ 26 ಎಫ್ 962 ಪಣಜಿ – ಗದಗ ಬೆಟಗೇರಿ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣ ಮಾಡಿ, ಮಾರ್ಚ್ 13ರಂದು ಬೆಳಗ್ಗೆ 01 ಗಂಟೆಗೆ ಧಾರವಾಡ ಬಸ್ ನಿಲ್ದಾಣಕ್ಕೆ ಆಗಮಿಸಿರುದ್ದರು. ಅಲ್ಲಿಂದ ಆಟೋ ಮೂಲಕ ಧಾರವಾಡದ ತಮ್ಮ ಮನೆ ತಲುಪಿದ್ದರು.
ಅನಾರೋಗ್ಯದ ಕಾರಣ ಮಾರ್ಚ್ 17ರಂದು ಧಾರವಾಡದ ಸ್ಪಂದನಾ ಆಸ್ಪತ್ರೆಗೆ ಕೊರೊನಾ ಸೋಂಕಿತ ರೋಗಿ ಭೇಟಿ ನೀಡಿದ್ದರು. ಮಾರ್ಚ್ 18ರಿಂದ 21ರವರೆಗೆ ಓಪಿಡಿ ಸಂಖ್ಯೆ 6ರೊಂದಿಗೆ ಎಸ್‍ಡಿಎಂ ಆಸ್ಪತ್ರೆಯ ರೂಮ್ ನಂಬರ್ 4ರಲ್ಲಿ ಚಿಕಿತ್ಸೆ ಪಡೆದಿದ್ದರು.
ಈ ವ್ಯಕ್ತಿ ಪ್ರಯಾಣಿಸಿರುವ ವಿಮಾನ, ಬಸ್, ಆಟೋದಲ್ಲಿ ಪ್ರಯಾಣಿಸಿರುವವರು, ರೋಗಿ ಭೇಟಿ ನೀಡಿರುವ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಆ ಸಮಯದಲ್ಲಿ ಹಾಜರಿದ್ದ ಸಾರ್ವಜನಿಕರಿಗೂ ಸೋಂಕು ತಗಲುವ ಸಾಧ್ಯತೆ ಇದ್ದು, ಅಂತಹವರು ತಮ್ಮ ಮನೆಯಿಂದ ಹೊರಬರದೇ ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ಸಹಾಯವಾಣಿ 104 ಮತ್ತು 1077 ನಂಬರ್ ಗಳಿಗೆ ಕರೆ ಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.