ಬೆಂಗಳೂರು: ಕರ್ನಾಟಕದಲ್ಲಿ 10 ಸಾವಿರ ಮಂದಿಗೆ ಸೋಂಕು ತಗಲಿದರೂ ಅದನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ ಹೈಕೋರ್ಟ್‍ಗೆ ರಾಜ್ಯ ಸರ್ಕಾರ ತಿಳಿಸಿದೆ. ಹೈಕೋರ್ಟ್ ಗೆ ವ್ಯಕ್ತಿಯೊಬ್ಬರು ಇ-ಮೇಲ್ ಮೂಲಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರ ಈ ಮಾಹಿತಿ ನೀಡಿದೆ.
ದಿನೇ ದಿನೇ ರೋಗಿಗಳ ಸಂಖ್ಯೆ ಏರಿಕೆ ಆಗುತ್ತಿರುವ ಬೆನ್ನಲ್ಲೇ ಎನ್ 95 ಮಾಸ್ಕ್, ಪಿಪಿಇ(ವೈಯಕ್ತಿಕ ಸುರಕ್ಷ ಸಾಧನ) ಕಿಟ್, ಮೂರು ಪದರದ ಮಾಸ್ಕ್ ಕೊರತೆ ಇರುವ ಹಿನ್ನೆಲೆಯಲ್ಲಿ ಖರೀದಿ ನಡೆಸಲು ಸಿದ್ಧತೆ ನಡೆಯುತ್ತಿದೆ. ಅಷ್ಟೇ ಅಲ್ಲದೇ ಪ್ರತಿನಿತ್ಯ 50 ಸಾವಿರ ಲೀಟರ್ ಸ್ಯಾನಿಟೈಸರ್ ಉತ್ಪಾದನೆ ಆಗುತ್ತಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ರಾಜ್ಯದಲ್ಲಿ ಹೆಚ್ಚಿನ ಗಾರ್ಮೆಂಟ್ಸ್ ಗಳಿರುವ ಹಿನ್ನೆಲೆಯಲ್ಲಿ ಗಾರ್ಮೆಂಟ್ಸ್ ಗಳನ್ನು ಬಳಸಿ ಕಿಟ್ ಉತ್ಪಾದಿಸಬೇಕು. ಕಚ್ಚಾ ವಸ್ತುಗಳ ಅನಿಯಂತ್ರಿತ ಸಾಗಾಟಕ್ಕೆ ಅವಕಾಶ ನೀಡಬೇಕು ಎಂದು ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತು.
ಖಾಸಗಿ ಆಸ್ಪತ್ರೆಗಳಿಗೂ ಪಿಪಿಇ ಕಿಟ್ ಒದಗಿಸಬೇಕು. ನಿಗದಿತ ದರ ವಿಧಿಸಿ ಪಿಪಿಇ ಕಿಟ್ ಒದಗಿಸಬಹುದೇ? ಈ ಬಗ್ಗೆ ನಿಲುವು ತಿಳಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತು.
ಕರ್ನಾಟಕದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು ಮಾರ್ಚ್ 8 ರಂದು. ಖಾಸಗಿ ಕಂಪನಿಯ ಟೆಕ್ಕಿಗೆ ಕೊರೊನಾ ಬಂದಿತ್ತು. ಇದಾದ 17 ದಿನದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50ಕ್ಕೆ ಏರಿಕೆ ಆಗಿತ್ತು. ಮಾರ್ಚ್ 31ಕ್ಕೆ 100ನೇ ಪ್ರಕರಣ ಬಂದಿತ್ತು. ಅಂದರೆ ಮಾರ್ಚ್ 25 ರಿಂದ 31ರವರೆಗಿನ 6 ದಿನದಲ್ಲಿ 50 ಮಂದಿಗೆ ಪಾಸಿಟಿವ್ ಬಂದಿತ್ತು. ಇದಾದ ನಂತರ ಏಪ್ರಿಲ್ 5ಕ್ಕೆ 150 ಮಂದಿಗೆ ಕೊರೊನಾ ಬಂದಿದ್ದರೆ ಕಳೆದ 5 ದಿನದಲ್ಲೇ 57 ಮಂದಿಗೆ ಸೋಂಕು ತಗಲಿದ್ದು ಕೊರೊನಾ ನಿಯಂತ್ರಣ ಸಾಧ್ಯವೇ ಎನ್ನುವ ಪ್ರಶ್ನೆ ಎದ್ದಿದೆ.
ಮಾ.21ರಿಂದ ರಾಜ್ಯಾದ್ಯಂತ ಲಾಕ್‍ಡೌನ್ ಘೋಷಣೆಯಾಗಿದೆ. ಅಷ್ಟೇ ಅಲ್ಲದೇ ವಿದೇಶದಿಂದ ಬಂದವರ ಕ್ವಾರಂಟೈನ್ ಅವಧಿಯೂ ಪೂರ್ಣವಾಗಿದೆ. ಆದರೆ ನಂಜನಗೂಡು ಫಾರ್ಮಾ ಕಂಪನಿ ಮತ್ತು ದೆಹಲಿಯ ಜಮಾತ್‍ಗೆ ತೆರಳಿದವರು ಮತ್ತು ಅವರ ಸಂಪರ್ಕಕ್ಕೆ ಬಂದವರಿಂದ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ 207 ಮಂದಿಗೆ ಕೊರೊನಾ ಬಂದಿದ್ದು, 6 ಮಂದಿ ಮೃತ ಪಟ್ಟಿದ್ದಾರೆ. 30 ಮಂದಿ ಡಿಸ್ಚಾರ್ಜ್ ಆಗಿದ್ದು, 171 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳ ಪೈಕಿ ಒಬ್ಬರನ್ನು ಐಸಿಯುನಲ್ಲಿ, ಒಬ್ಬರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ.
ಮೃತಪಟ್ಟವರು:
ಕಲಬರುಗಿಯ ಹಿರಿಯ ವ್ಯಕ್ತಿ(ರೋಗಿ 6), ಚಿಕ್ಕಬಳ್ಳಾಪುರದ ಮಹಿಳೆ(ರೋಗಿ 53), ತುಮಕೂರಿನ ಹಿರಿಯ ವ್ಯಕ್ತಿ(ರೋಗಿ 125) ಮೃತಪಟ್ಟಿದ್ದರು. ಬಾಗಲಕೋಟೆಯ 75 ವರ್ಷದ ವ್ಯಕ್ತಿ(ರೋಗಿ 166), ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷದ ವೃದ್ಧೆ(ರೋಗಿ 177) ಸಾವನ್ನಪ್ಪಿದ್ದಾರೆ.
ಬಿಡುಗಡೆಯಾದವರು:
ಆರಂಭದಲ್ಲಿ ಕೊರೊನಾ ಬಂದವರ ಪೈಕಿ ಹಲವು ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರೋಗಿ ಸಂಖ್ಯೆಗಳಾದ 1, 2, 3, 4, 5, 7, 8, 9, 10, 11, 12, 13, 14, 15, 20, 21, 23, 24, 26, 28, 29, 31, 34 -ಕೆ, 35, 36, 39-ಕೆ, 41-ಕೆ, 42, 63, 75 ಡಿಸ್ಚಾರ್ಜ್ ಆಗಿದ್ದಾರೆ.
ಯಾವ ದಿನ ಎಷ್ಟು ಪ್ರಕರಣ?
ಮಾ.8 – 1
ಮಾ.25 – 50
ಮಾ.31 – 100
ಏ.5 – 150
ಏ.9 – 197
ಎಷ್ಟು ದಿನದಲ್ಲಿ ಎಷ್ಟು ಏರಿಕೆ?
1-50 — 17 ದಿನ
1-100 — 6 ದಿನ
100-150 — 5 ದಿನ
150-197 — 4 ದಿನ