ಹಾಸನ: ಜಿಲ್ಲೆ ಗ್ರೀನ್‍ಝೋನ್‍ಗೆ ಸೇರಿದರೂ ಕೂಡ ವಾರದಲ್ಲಿ ಮೂರು ದಿನ ಮಾತ್ರ ಮದ್ಯ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಎಂದಿನಂತೆ ಲಾಕ್‍ಡೌನ್ ಮೇ 17ರವರೆಗೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿರುವ ಜಿಲ್ಲಾಧಿಕಾರಿ ಆರ್.ಗಿರೀಶ್, ಮಂಗಳವಾರ, ಗುರುವಾರ, ಶನಿವಾರ ಮಾತ್ರ ಹಾಸನದಲ್ಲಿ ಮದ್ಯ, ದಿನಸಿ ವಸ್ತು ಸೇರಿದಂತೆ ಇತರೆ ವಸ್ತು ಕೊಳ್ಳಲು ಅಂಗಡಿಗಳನ್ನು ತೆರೆಯಬಹುದು. ಉಳಿದ ದಿನಗಳು ಎಂದಿನಂತೆ ಲಾಕ್‍ಡೌನ್ ಮುಂದುವರಿಯಲಿದೆ. ಮೇ 17ರವರೆಗೆ ಹಾಸನದಲ್ಲಿ ನಿಷೇಧಾಜ್ಞೆ ಇರಲಿದ್ದು, ಹೀಗಾಗಿ ಐದಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ ಎಂದರು.
Advertisement
Advertisement
ಅಂತರ್ ಜಿಲ್ಲಾ ಪ್ರವೇಶವನ್ನು ಹಾಸನದಲ್ಲಿ ನಿಷೇಧಿಸಲಾಗಿದೆ. ಅನಿವಾರ್ಯತೆ ಇದ್ದವರು ಪಾಸ್ ಪಡೆದು ಓಡಾಡಬೇಕು. ಅಗತ್ಯಕ್ಕೆ ಅನುಗುಣವಾಗಿ ಜಿಲ್ಲೆಯೊಳಗೆ ಬಸ್ ಸಂಚಾರ ಇರಲಿದೆ. ಜನರು ಮಾಸ್ಕ್ ಧರಿಸದೆ ಹೊರಗೆ ಬರಬಾರದು. ಮದುವೆ ಸೇರಿದಂತೆ ಇನ್ನಿತರ ಸಮಾರಂಭದಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಯಾವುದೇ ನಿಯಮ ಮೀರಿದರೆ ದಂಡ ವಿಧಿಸಲಾಗುವುದು. ಲಾಡ್ಜ್, ಥಿಯೇಟರ್, ಪಾರ್ಕ್ ಎಂದಿನಂತೆ ಬಂದ್ ಆಗಿರಲಿವೆ ಎಂದು ಜಿಲ್ಲಾಧಿಕಾರಿ ಗಿರೀಶ್ ಮಾಹಿತಿ ನೀಡಿದ್ದಾರೆ.