ಚಿಕ್ಕಮಗಳೂರು: ಎಕರೆಗೆ ಎರಡು ಲಕ್ಷ ರೂಪಾಯಿ ಹಣ ಖರ್ಚು ಮಾಡಿ ಮೂರು ಎಕರೆಯಲ್ಲಿ ಬೆಳೆದಿರೋ ಕೆಂಪು ಗುಲಾಬಿ ಮೇಲೆ ಕೊರೊನಾ ಕರಿನೆರಳು ಬಿದ್ದ ಪರಿಣಾಮ ರೈತ ಮಹಿಳೆ ತಾನೇ ಬೆಳೆದ ಹೂವನ್ನ ತಾನೇ ತಿಪ್ಪೆಗೆ ಎಸೆಯುತ್ತಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ರೈತ ಮಹಿಳೆ ನಜ್ಮಾ ಮತಿಘಟ್ಟ ಎಂಬವರು ಮೂರು ಎಕರೆಯಲ್ಲಿ ಕೆಂಪು ಗುಲಾಬಿ ಬೆಳೆದಿದ್ದಾರೆ. ಮದುವೆ, ಜಾತ್ರೆ ಸೇರಿದಂತೆ ಶುಭ ಸಮಾರಂಭಗಳಿಗೆ ಸುಗಂಧ ರಾಜ ಹೂವಿನ ಜೊತೆ ಸೇರಿಸಿ ಕಟ್ಟುವ ಕೆಂಪು ಗುಲಾಬಿ ಹೊಲದ ಬದಿಯ ಗುಂಡಿಯಲ್ಲಿ ಸುಟ್ಟು ಬೂದಿಯಾಗುತ್ತಿದ್ರೆ, ಹಗಲಿರುಳು ಕಷ್ಟಪಟ್ಟು ಬೆಳೆದ ರೈತ ಮಹಿಳೆಯ ಕಣ್ಣಾಲಿಗಳು ತೇವಗೊಳುತ್ತಿವೆ.
Advertisement
2018 ಹಾಗೂ 2019ರಲ್ಲಿ ಪ್ರಕೃತಿಯ ಕಣ್ಣಾಮುಚ್ಚಾಲೆ ಆಟಕ್ಕೆ ನಷ್ಟ ಅನುಭವಿಸಿದ್ದ ಕಾಫಿನಾಡಿನ ರೈತರು ಈ ವರ್ಷ ಕೊರೊನಾ ಕಾಟಕ್ಕೆ ಕಂಗಾಲಾಗಿದ್ದಾರೆ. ಕಳೆದ ವರ್ಷವೂ ಇದೇ ಜಾಗದಲ್ಲಿ ನಜ್ಮಾ ಚೆಂಡು ಹೂ ಬೆಳೆದಿದ್ದರು. 35 ಕ್ವಿಂಟಾಲ್ ಹೂವಿನ ನಿರೀಕ್ಷೆಯಲ್ಲಿದ್ದ ಇವರಿಗೆ ಕಳೆದ ವರ್ಷದ ಮಳೆ ಎಲ್ಲವನ್ನೂ ನುಂಗಿ ನೀರು ಕುಡಿದಿತ್ತು. ಹೊಲದಲ್ಲಿ ಗಿಡ ಅರ್ಧ ಮುಳುಗುವಂತೆ ನೀರು ನಿಂತಿದ್ರಿಂದ ಹರಿಯುತ್ತಿದ್ದ ನೀರಿನಲ್ಲಿ ಗಿಡವೂ ತೇಲಿ ಹೋಗಿತ್ತು. ಈ ವರ್ಷ ಗಿಡದ ತುಂಬಾ ಹೂವಿದೆ. ಸೂರ್ಯನ ಕಿರಣಕ್ಕೆ ಹೊಳೆಯುತ್ತಿದೆ. ಆದರೆ ಸಂಜೆಯಾಗುತ್ತಿದ್ದಂತೆ ತಿಪ್ಪೆಗೆ ಸೇರಿ ಸುಟ್ಟು ಬೂದಿಯಾಗುತ್ತಿದೆ. ಯಾಕಂದ್ರೆ ತಾನೇ ಮಕ್ಕಳಂತೆ ಬೆಳೆಸಿದ ಗಿಡಗಳನ್ನ ಕಿತ್ತು ನಜ್ಮಾ ತಾನೇ ತಿಪ್ಪೆಗೆ ಸುರಿಯುತ್ತಿದ್ದಾರೆ.
Advertisement
Advertisement
ಸರ್ಕಾರಕ್ಕೆ ಮನವಿ: ಕಡೂರಿನ ಬರಪೀಡಿತ ಪ್ರದೇಶದಲ್ಲಿ ನಜ್ಮಾ ಅವರು ಬೆಳೆದಿರೋ ಈ ಗಿಡದಲ್ಲಿ ದಿನಂ ಪ್ರತಿ 50-60 ಕೆ.ಜಿ. ಹೂ ಸಿಗುತ್ತೆ. ಆದರೆ ಸಾಗಿಸೋದಕ್ಕೆ ಸಾರಿಗೆ ವ್ಯವಸ್ಥೆ ಇಲ್ಲ. ಜಾತ್ರೆ, ಮದುವೆ, ಸಭೆ-ಸಮಾರಂಭ ನಡೆಯುತ್ತಿಲ್ಲ. ಹೂವಿನ ವ್ಯಾಪಾರಿಗಳು ವ್ಯಾಪರವನ್ನೇ ನಿಲ್ಲಿಸಿದ್ದಾರೆ. ಫ್ಲವರ್ ಮಾರ್ಕೆಟ್ ಸಂಪೂರ್ಣ ನೆಲಕಚ್ಚಿದೆ. ಈ ಮಧ್ಯೆ ಪೊಲೀಸರು ಹಳ್ಳಿ ದಾಟೋದಕ್ಕೂ ಬಿಡ್ತಿಲ್ಲ. ಹೆಚ್ಚಾಗಿ ತುಮಕೂರು, ಹಾಸನ, ಶಿವಮೊಗ್ಗಕ್ಕೆ ಹೋಗುತ್ತಿದ್ದ ಈ ಹೂವು ಇಂದು ಜಮೀನು ಬದಿಯ ತಿಪ್ಪೆ ಸೇರುತ್ತಿದೆ. ಕಷ್ಟ ಪಟ್ಟು ಹೂ ಬೆಳೆದ ನಜ್ಮಾಗೆ ಮುಂದಿನ ದಾರಿಯೇ ಕಾಣದಂತಾಗಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕೆಂದು ರೈತ ಮಹಿಳೆ ನಜ್ಮಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
Advertisement
ಲಾಕ್‍ಡೌನ್ ಮಧ್ಯೆಯೂ ಸರ್ಕಾರ ರೈತರ ಕೃಷಿ ಚಟುವಟಿಕೆಗೆ ಅವಕಾಶ ನೀಡಿದ್ದು, ತಿಂಗಳಿಂದ ಮನೆಯಲ್ಲಿದ್ದ ರೈತರು ಹಾಗೂ ಕೂಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ. ಆದರೆ ಕೂಲಿಗೆ ಬರೋ ಕೆಲಸಗಾರರಿಗೆ ಕೂಲಿ ಕೊಡೋದಕ್ಕು ನಜ್ಮಾಗೆ ಸಾಧ್ಯವಾಗ್ತಿಲ್ಲ. ಹೂವಿನ ತೋಟದಲ್ಲಿ ಕೆಲಸ ಮಾಡಲು ದಿನಂ ಪ್ರತಿ ಕನಿಷ್ಠ 15-20 ಜನ ಬೇಕು. ಅವರಿಗೆ ಸಂಬಳವೇ 4-5 ಸಾವಿರ ಆಗುತ್ತೆ. ಹೂವು ಸಂಪೂರ್ಣ ಹಾಳಾಗ್ತಿರೋದ್ರಿಂದ ಜನರನ್ನೂ ಕೆಲಸಕ್ಕೆ ತೆಗೆದಕೊಳ್ಳದೇ ಹೂವನ್ನ ಕಿತ್ತು ತಿಪ್ಪೆಗೆ ಹಾಕುತ್ತಿದ್ದಾರೆ. ಹೂವಿನ ಗಿಡಕ್ಕೆ ಡ್ರಿಪ್ ಮಾಡಿಸಿ, ಮೂರು ದಿನಕ್ಕೊಮ್ಮೆ ಔಷಧಿ ಸಿಂಪಡಿಸಿ ಬೆಳೆಸಿದ್ದ ಗಿಡ ಈಗ ಫಸಲು ಕೊಡ್ತಿದ್ದು ಶ್ರಮಕ್ಕೆ ತಕ್ಕ ಫಲ ಗಿಡದಲ್ಲಿದೆ. ಆದರೆ ಹಣದಲ್ಲಿಲ್ಲ ಎಂಬಂತಾಗಿದೆ. ಸರ್ಕಾರ ಇಂತಹ ರೈತರ ನೆರವಿಗೆ ಬಾರದಿದ್ರೆ ಲಕ್ಷಾಂತರ ರೈತರ ಕೋಟ್ಯಾಂತರ ರೂಪಾಯಿ ಹೊಲ-ಗದ್ದೆಗಳ ಮಣ್ಣಲ್ಲಿ ಗೊಬ್ಬರವಾಗೋದು ಗ್ಯಾರಂಟಿ ಅನ್ನೋದು ಖಾತ್ರಿಯಾದಂತಿದೆ.
ಕಾಫಿನಾಡು ವಿಭಿನ್ನ ಹವಾಗುಣದ ಜಿಲ್ಲೆ. ಮಲೆನಾಡು, ಅರೆಮಲೆನಾಡು, ಬಯಲುಸೀಮೆ ಮೂರು ಹವಾಗುಣವನ್ನೂ ಹೊಂದಿದೆ. ಒಂದೊಂದು ಭಾಗದ್ದು ಒಂದೊಂದು ಗೋಳು. ಬೇಕಾದಾಗ ಬೇಕಾದಷ್ಟು ಮಳೆ ಬರಲ್ಲ. ಬೇಡವಾದಾಗ ಸೈತಾನನಂತೆ ಸುರಿದು ಇರೋ-ಬರೋದ್ನೆಲ್ಲಾ ಕೊಚ್ಚಿ ಹಾಕುತ್ತೆ. ಬೆಲೆಯೂ ಅಷ್ಟೆ. ಬೆಳೆ ಇದ್ದಾಗ ಬೆಲೆ ಇರಲ್ಲ. ಬೆಲೆ ಇದ್ದಾಗ ಬೆಳೆ ಇರಲ್ಲ. ಕಾಫಿನಾಡ ಈ ಮೂರು ಹವಾಗುಣದಿಂದ ರೈತರು ಪ್ರತಿವರ್ಷ ಪ್ರಕೃತಿಯ ಜೊತೆ ಜೂಜಾಡುತ್ತಲೇ ಬದುಕುತ್ತಿದ್ದಾರೆ. ಪ್ರಕೃತಿ ಕಣ್ಣಾಮುಚ್ಚಾಲೆ ಆಟದಿಂದ ಅಲ್ಲ-ಸ್ವಲ್ಪವನ್ನಾದ್ರು ಕೈಗೆ ಸಿಗ್ತಿತ್ತು. ಆದ್ರೆ ಈ ಕೊರೊನಾ ಉಂಡು ಹೋದ, ಕೊಂಡು ಹೋದ ಎಂಬಂತೆ ಇರೋದನ್ನೂ ನುಂಗಿ ನೀರು ಕುಡಿತಿದೆ. ಹಗಲಿರುಳು ಕಷ್ಟಪಟ್ಟು ಹೂ ಬೆಳೆದ ನಜ್ಮಾ ಮೊಗದಲ್ಲಿ ಹೂವಿನ ಅಂದದಲ್ಲಿರೋ ನಗುವೇ ಇಲ್ಲದಂತಾಗಿದೆ.