-ಅನಾವಶ್ಯಕವಾಗಿ ಜನ ರಸ್ತೆಗಿಳಿಯುತ್ತಿರುವುದರಿಂದ ಕ್ರಮ
ರಾಯಚೂರು: ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಹಿನ್ನೆಲೆ ರಾಯಚೂರು ಜಿಲ್ಲೆಯಾದ್ಯಂತ ಲಾಕ್‍ಡೌನ್ ಬಿಗಿಗೊಳಿಸಲಾಗಿದೆ. ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಹೋಗದಂತೆ ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಒಟ್ಟು 4000 ಕಡೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಅನಾವಶ್ಯಕವಾಗಿ ಜನ ಒಂದೆಡೆಯಿಂದ ಇನ್ನೊಂದೆಡೆಗೆ ತಿರುಗಾಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಆಸ್ಪತ್ರೆಗಳಿಗೆ ಮತ್ತು ಸರ್ಕಾರಿ ಕೆಲಸಕ್ಕೆ ಹೋಗುವವರು ಪಾಸ್ ತೋರಿಸಿದಲ್ಲಿ ಮಾತ್ರ ಬಿಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಜನ ಓಡಾಡುವುದನ್ನ ಕಡಿಮೆ ಮಾಡಿರಲಿಲ್ಲ. ನಗರಸಭೆ, ಪಟ್ಟಣ ಪಂಚಾಯಿತಿಯಿಂದ ಆಯಾ ಸ್ಥಳಗಳಲ್ಲೇ ಸೌಕರ್ಯ ಕಲ್ಪಿಸುವ ವ್ಯವಸ್ಥೆಯನ್ನು ಮಾಡಿದರೂ ಸಾರ್ವಜನಿಕರು ಹಾಲು, ತರಕಾರಿ, ಔಷಧ ಇನ್ನಿತರೆ ವಸ್ತುಗಳನ್ನು ತರುವ ನೆಪದಲ್ಲಿ ಓಡಾಡುತ್ತಿದ್ದರು. ಹೀಗಾಗಿ ಜಿಲ್ಲೆ ಗ್ರೀನ್ ಝೋನ್ ನಲ್ಲಿದ್ದರೂ ಲಾಕ್‍ಡೌನ್ ಬಿಗಿಗೊಳಿಸಲಾಗಿದೆ.
ಮಾನವಿ, ಸಿಂಧನೂರು, ಮಸ್ಕಿ, ಲಿಂಗಸೂಗೂರು, ಮುದಗಲ್, ಕವಿತಾಳ, ಸಿರವಾರ ಸೇರಿ ಒಟ್ಟು ಹತ್ತು ಪಟ್ಟಣಗಳಲ್ಲಿ ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಹೋಗದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸುವ ಮೂಲಕ ಅನಾವಶ್ಯಕವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಓಡಾಡದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಕೊರೊನಾ ಸೋಂಕು ಜಿಲ್ಲೆಯಲ್ಲಿ ವ್ಯಾಪಿಸದಂತೆ ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸುವಂತೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇನ್ನೂ ಮಾನವಿಯಲ್ಲಿ ಊಟಕ್ಕಾಗಿ ತೊಂದರೆ ಅನುಭವಿಸುತ್ತಿದ್ದ ಅಲೆಮಾರಿ ಜನಾಂಗದವರು ಹಾಗೂ ಇತರೆ ರಾಜ್ಯದಿಂದ ಬಂದ ಕೂಲಿ ಕಾರ್ಮಿಕರಿಗೆ ನಗರದ ಸರ್ಕಾರಿ ಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು ಬೇರೆಡೆ ಓಡಾಡದಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿದ್ದಾರೆ.