Connect with us

Bengaluru City

ಯಡಿಯೂರಪ್ಪ ಮನೆಯಲ್ಲಿ ಮಧ್ಯರಾತ್ರಿ ಪೊಲೀಸರ ತಲಾಶ್!

Published

on

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ಪೊಲೀಸರು ಜುಲೈ 15ರ ಮಧ್ಯರಾತ್ರಿ ಆಗಮಿಸಿ ಹುಡುಕಾಟ ನಡೆಸಿದ್ದಾರೆ.

ಹೌದು. ಈಶ್ವರಪ್ಪ ಅವರ ಪಿಎ ವಿನಯ್ ಕಿಡ್ನಾಪ್ ಪ್ರಕರಣದಲ್ಲಿ ಬಿಎಸ್‍ವೈ ಆಪ್ತ ಸಹಾಯಕ ಸಂತೋಷ್ ಭಾಗಿಯಾಗಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯರಾತ್ರಿ ಧವಳಗಿರಿ ನಿವಾಸಕ್ಕೆ ಆಗಮಿಸಿದ್ದಾರೆ. ಈ ವೇಳೆ ಮನೆಯ ಭದ್ರತಾ ಸಿಬ್ಬಂದಿ ಪೊಲೀಸರ ಜೊತೆ ಸಂತೋಷ್ ಮನೆಯಲ್ಲಿ ಇಲ್ಲ ಎಂದು ಹೇಳಿ ಕಳುಹಿಸಿದ್ದಾರೆ.

ತನ್ನ ಮನೆಗೆ ಪೊಲೀಸರು ಹುಡುಕಾಟ ನಡೆಸಿದ್ದನ್ನು ನೋಡಿ ಗರಂ ಆಗಿರುವ ಬಿಎಸ್‍ವೈ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?
ಪತ್ರದಲ್ಲಿ ಸಂತೋಷ್ ಹುಡುಕಿಕೊಂಡು ಎಸಿಪಿ ಬಡಿಗೇರ್ ನೇತೃತ್ವದಲ್ಲಿ ತಂಡ ಬಂದಿತ್ತು. ಆ ತಂಡದವರು ನಮ್ ಸೆಕ್ಯೂರಿಟಿ ಬಳಿ ಬಂದು ಸಂತೋಷ್ ಬಗ್ಗೆ ಕೇಳಿದ್ದರು. ಸಂತೋಷ್ ಕೊಠಡಿ ಬಗ್ಗೆಯೂ ವಿಚಾರಿಸಿದ್ದರು. ಆದರೆ ಸಂತೋಷ್ ಮನೆಯಲ್ಲಿ ಇಲ್ಲ ಎಂದು ಸೆಕ್ಯೂರಿಟಿ ಹೇಳಿದ್ದರು.

ನನ್ನ ಮಾಹಿತಿ ಪ್ರಕಾರ ಪ್ರಕರಣದಲ್ಲಿ ಸಂತೋಷ್ ಭಾಗಿಯಾಗಿಲ್ಲ. ಕಳೆದ 7 ವರ್ಷಗಳಿಂದ ಸಂತೋಷ್ ನನ್ನ ಬಳಿ ಕೆಲಸ ಮಾಡುತ್ತಿದ್ದು, ನನ್ನ ಸಂಬಂಧಿ ಕೂಡ ಹೌದು. ಸಂತೋಷ್ ವಿರುದ್ಧ ಸಾಕ್ಷಿಗಳನ್ನ ಸೃಷ್ಟಿಸಿ ಪಿತೂರಿ ನಡೆಯುತ್ತಿದೆ. ಮಧ್ಯರಾತ್ರಿ ಪೊಲೀಸರು ನನ್ನ ಮನೆಗೆ ಬಂದು ವಿಚಾರಣೆ ನಡೆಸುವ ಅವಶ್ಯಕತೆ ಇರಲಿಲ್ಲ. ನಾನು ಈಗಾಗಲೇ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಡಿಜಿ ಆರ್.ಕೆ.ದತ್ತಾ ಅವರ ಜತೆ ಮಾತನಾಡಿ ಮಾಹಿತಿ ಪಡೆದಿದ್ದೇನೆ.

ಈಗಾಗಲೇ ಆರೋಪಿ ರಾಜೇಂದ್ರ ಅರಸ್ ಎಂಬ ವ್ಯಕ್ತಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಕೂಡ ಕೊಟ್ಟಿದೆ. ಆದ್ರೆ ಪೊಲೀಸರು ರಾಜೇಂದ್ರ ಅರಸ್‍ಗೆ ಸಂತೋಷ್ ಭಾಗಿಯಾಗಿದ್ದಾನೆ ಎಂದು ಹೇಳಲು ಒತ್ತಡ ಹಾಕುತ್ತಿದ್ದಾರೆ. ಹಾಗಾಗಿ ನಾನು ಈ ಪ್ರಕರಣದ ತನಿಖೆಗೆ ಅಡ್ಡಿ ಆಗುತ್ತಿಲ್ಲ. ಆದರೆ ದುರುದ್ದೇಶಪೂರ್ವಕವಾಗಿ ಸಂತೋಷ್ ಮೇಲೆ ಆರೋಪ ಸರಿಯಲ್ಲ. ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅವರು ಪತ್ರ ಬರೆದಿದ್ದಾರೆ.

ದ್ವೇಷದ ರಾಜಕಾರಣ: ಸಂತೋಷ್ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಸಣ್ಣ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಸಲಾಗ್ತಿದೆ. ಸರ್ಚ್ ವಾರೆಂಟ್ ಇಲ್ಲದೇ ಪೊಲೀಸರು ನನ್ನ ಮನೆ ಸರ್ಚ್ ಮಾಡಲು ಬಂದಿದ್ದರು. ರಾತ್ರಿ 12 ಗಂಟೆಗೆ ನಮ್ಮ ಸಿಬ್ಬಂದಿಗೆ ಬೆದರಿಕೆ ಹಾಕಿ ಹೋಗಿದ್ದಾರೆ. ಕಾಂಗ್ರೆಸ್ ದ್ವೇಷದ ರಾಜಕಾರಣವನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತರುತ್ತೇನೆ ಎಂದು ಬಿಎಸ್‍ವೈ ಹೇಳಿದ್ದಾರೆ.

ನಾನು ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದೆ. ಆದ್ರೂ ಧಿಡೀರ್ ಆಗಿ ರಾತ್ರಿ 12 ಗಂಟೆ ಮೇಲೆ ನನ್ನ ಮನೆಗೆ ಬಂದು ಹುಡುಕಾಡಿದ್ದಾರೆ. ಸರ್ಚ್ ಮಾಡುವ ಹಾಗಿದ್ರೆ ಹಗಲು ಹೊತ್ತಿನಲ್ಲಿ ಬರಬಹುದಿತ್ತು. ರಾತ್ರಿ ಹೊತ್ತಿನಲ್ಲಿ ದುರುದ್ದೇಶ ಇಟ್ಟುಕೊಂಡು ಪೊಲೀಸರು ಬಂದಿದ್ದರು. ಕಾಂಗ್ರೆಸ್ ನ ಈ ದ್ವೇಷದ ರಾಜಕಾರಣ ಬಹಳ ದಿನ ನಡೆಯುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ವಿಡಿಯೋ ವಿಚಾರಕ್ಕೆ ಬಿಎಸ್‍ವೈ ಪಿಎಯಿಂದ ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್‍ಗೆ ಸುಪಾರಿ?

 

Click to comment

Leave a Reply

Your email address will not be published. Required fields are marked *