ನವದೆಹಲಿ: ಸಬ್ ಇನ್ಸ್ ಪೆಕ್ಟರ್ ಪುತ್ರಿಯ ಮೇಲೆ ಐದು ತಿಂಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದ 17 ವರ್ಷದ ಬಾಲಕನನ್ನು ಬುಧವಾರ ದ್ವಾರಕಾದಲ್ಲಿ ಬಂಧಿಸಲಾಗಿದೆ.
ಮಂಗಳವಾರ ಬೆಳಗ್ಗೆ 16 ವರ್ಷ ಸಂತ್ರಸ್ತೆಯ ಮನೆಗೆ ಆರೋಪಿ ತೆರಳಿ ಸೆಕ್ಸ್ ನಡೆಸುವಂತೆ ಒತ್ತಡ ಹೇರಿದ್ದಾನೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ತಂದೆ ಆರೋಪಿಯನ್ನು ಹಿಡಿದು ದ್ವಾರಕಾ ಉತ್ತರ ವಲಯದ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಬಂಧಿತ ಬಾಲಕನ ತಂದೆ ಹಾಗೂ ಸಂತ್ರಸ್ತ ಬಾಲಕಿಯ ತಂದೆ ದ್ವಾರಕಾ ಜಿಲ್ಲೆಯ ಬೇರೆ ಬೇರೆ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರು ತಿಂಗಳ ಹಿಂದೆ ಸಂತ್ರಸ್ತ ಬಾಲಕಿಗೆ ಆಕೆಯ ಸಹೋದರ ಬಂಧಿತ ಬಾಲಕನ್ನು ಪರಿಚಯ ಮಾಡಿಸಿದ್ದ ಎಂದು ವರದಿಯಾಗಿದೆ.
ಆರಂಭದಲ್ಲಿ ಇಬ್ಬರು ಉತ್ತಮ ಸ್ನೇಹಿತರಂತೆ ಇದ್ದರು. ಆದರೆ ಕೆಲವು ದಿನಗಳ ಹಿಂದೆ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ತಂಪು ಪಾನಿಯಲ್ಲಿ ಅಮಲು ಬರುವ ವಸ್ತುವನ್ನು ಹಾಕಿಕೊಟ್ಟಿದ್ದನು. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿ, ಅದನ್ನು ವಿಡಿಯೋ ಮಾಡಿಕೊಂಡಿದ್ದನು.
ವಿಡಿಯೋಗಳ ಮೂಲಕ ಆಕೆಯನ್ನು ಹೆದರಿಸಿ, ಫೋನ್ ಮಾಡಿ ನಿರ್ಜನ ಪ್ರದೇಶ, ತೋಟದ ಮನೆಗೆ, ಹಾಸ್ಟೇಲ್ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆಸಿಕೊಂಡು ಅತ್ಯಾಚಾರ ಎಸಗುತ್ತಿದ್ದ. ಆಕೆಯ ಒಪ್ಪಿಗೆ ಇಲ್ಲದಿದ್ದರೂ 5 ತಿಂಗಳಿನಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲವು ದಿನಗಳಿಂದ ಮಾನಸಿಕವಾಗಿ ಕುಗ್ಗಿದ್ದ ಸಂತ್ರಸ್ತ ಬಾಲಕಿ ಮೊಬೈಲ್ನಲ್ಲಿ ಬಾಲಕನ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಸೋಮವಾರ ಮನೆಗೆ ಬಂದು ಆಕೆಯನ್ನು ಕರೆದುಕೊಂಡು ಹೋಗಲು ಯತ್ನಿಸಿದ್ದಾನೆ. ಆದರೆ ಆಕೆ ನಿರಾಕರಿಸಿದ್ದಳು. ಮಂಗಳವಾರ ಬಾಲಕನ ಜೊತೆಗೆ ಮಾತನಾಡುವಾಗ ಆಕೆಯ ತಂದೆ ಕೇಳಿಸಿಕೊಂಡಿದ್ದರು. ಆಗ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣವೇ ಬಾಲಕನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ.
ಬಾಲಕನನ್ನು ಬಾಲನ್ಯಾಯ ಮಂಡಳಿಗೆ ಹಾಜರು ಪಡಿಸಿ, ಈಗ ರಿಮ್ಯಾಂಡ್ ಹೋಮ್ ನಲ್ಲಿ ಇರಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv