ಬೆಂಗಳೂರು: ಬಸ್, ಮೆಟ್ರೋ, ಹಾಲು ದರ ಏರಿಕೆಯ ಬೆನ್ನಲ್ಲೇ ಈಗ ಅಡುಗೆ ಎಣ್ಣೆಗೆ (Cooking Oil) ಬೆಲೆ ಏರಿಕೆಯ ಬರೆ ಬಿದ್ದಿದೆ. ಅದರಲ್ಲೂ ತೆಂಗಿನಕಾಯಿ ಎಣ್ಣೆ (Coconut Oil) ದರ ಲೀಟರ್‌ಗೆ 300 ರೂ. ಗಡಿ ದಾಟಿದೆ.
ಯಾವುದೇ ಅಡುಗೆ ಮಾಡಬೇಕಾದರೂ ಅಡುಗೆ ಎಣ್ಣೆ ಬೇಕೇ ಬೇಕು. ಆದರೆ ಖಾದ್ಯ ತೈಲ ಬೆಲೆ ಕಳೆದ ಒಂದು ತಿಂಗಳಿಂದ ಏರಿಕೆಯಾಗುತ್ತಿದೆ. ಹೀಗಾಗಿ ಒಂದು ತಿಂಗಳ ಹಿಂದಿನ ಬೆಲೆಗೂ ಈಗಿನ ಬೆಲೆಗೂ 10 – 20 ರೂ. ಏರಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೂರ್ಯಕಾಂತಿ ಎಣ್ಣೆಯ ದರ ಏರಿಕೆಯಾಗಿದೆ. ಪ್ರಮುಖವಾಗಿ ಸನ್ ಫ್ಲವರ್, ಪಾಮ್ ಆಯಿಲ್, ಕಡಲೇಕಾಯಿ ಎಣ್ಣೆ, ಅರಳೆಎಣ್ಣೆ ಹಾಗೂ ಸಾಸಿವೆ ಎಣ್ಣೆಯಲ್ಲಿ 10-20 ರೂ. ರೂ. ಹೆಚ್ಚಾಗಿದೆ ಎನ್ನುತ್ತಾರೆ ಖಾದ್ಯತೈಲ ವ್ಯಾಪಾರಿಗಳು.
ತೆಂಗಿನ ಎಣ್ಣೆ ದರ ಏರಿಕೆ ಯಾಕೆ?
ಸಾಧಾರಣವಾಗಿ ಮಾರ್ಚ್ ಮಧ್ಯಭಾಗದಿಂದ ರಾಜ್ಯದಲ್ಲಿ ಬಿಸಿಲು ಹೆಚ್ಚಾಗುತ್ತದೆ. ಆದರೆ ಈ ಬಾರಿ ಜನವರಿ ಕೊನೆಯಿಂದಲೇ ಉಷ್ಣಾಂಶ ಏರಿಕೆಯಾಗುತ್ತಿದ್ದು ಎಳೆನೀರಿಗೆ ಹೆಚ್ಚು ಬಳಕೆಯಾಗುತ್ತಿವೆ. ಇದರ ಜೊತೆ ಕೊಬ್ಬರಿಯ ದರವೂ ಏರಿಕೆಯಾಗಿದೆ.
1 ವರ್ಷದಿಂದ ಕ್ವಿಂಟಾಲ್‌ಗೆ 8 ರಿಂದ 8,500 ರೂ. ಇದ್ದ ಕೊಬ್ಬರಿ ಪ್ರಸ್ತುತ 14,500 ರಿಂದ 15 ಸಾವಿರ ರೂ.ಗಳಿಗೆ ಏರಿಕೆಯಾಗಿದೆ. ಎಳನೀರು ಯಥೇಚ್ಛವಾಗಿ ಮಾರಾಟವಾಗುತ್ತಿರುವ ಕಾರಣ ಕೊಬ್ಬರಿ ಬೇಡಿಕೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇದರ ನೇರ ಪರಿಣಾಮ ತೆಂಗಿನ ಎಣ್ಣೆಯ ಮೇಲೆ ಬಿದ್ದಿದೆ. ಇದರಿಂದಾಗಿ ತೆಂಗಿನ ಎಣ್ಣೆ ದರ ಏರಿಕೆಯಾಗುತ್ತಿದೆ. ಹೀಗಾಗಿ ಒಂದು ಲೀಟರ್ ತೆಂಗಿನಕಾಯಿ ಎಣ್ಣೆ ಬೆಲೆಯಲ್ಲಿ 50 ರೂ. ಹೆಚ್ಚಾಗಿದೆ.
ಅಡುಗೆ ಎಣ್ಣೆಯನ್ನು ಅಕ್ರಮವಾಗಿ ಗೋಡಾನ್‌ಗಳಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಈ ಬಗ್ಗೆ ಆಹಾರ ಹಾಗೂ ನಾಗರೀಕ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಎಪಿಎಂಸಿ ವ್ಯಾಪಾರಿಗಳ ಸಂಘ ಒತ್ತಾಯಿಸಿದೆ.