ಸಾಯಲು ಮನಸ್ಸಿರುವವರು ಸಂಘ ಪರಿವಾರ ಸೇರಿ- ಪ್ರತಿಭಾ ಕುಳಾಯಿ ವಿವಾದಾತ್ಮಕ ಹೇಳಿಕೆ

Public TV
1 Min Read
UDP PRATHIBHA

ಉಡುಪಿ: ಸಾಯಲು ಮನಸ್ಸಿರುವವರು ಸಂಘ ಪರಿವಾರ ಸೇರಿ ಎಂದು ಮಂಗಳೂರಿನ ಸುರತ್ಕಲ್ ಕಾಂಗ್ರೆಸ್ ಕಾರ್ಪೋರೇಟರ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಉಡುಪಿಯ ಕಾರ್ಕಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತುಳುವಿನಲ್ಲಿ ಮಾಡಿರುವ ಭಾಷಣ ಈಗ ವೈರಲ್ ಆಗಿದೆ.

UDP 4

ಯಾರಿಗೆಲ್ಲ ಸಾಯಲು ಮನಸ್ಸಿದೆ ಅವರು ಸಂಘ ಪರಿವಾರ ಸೇರಿ. ದುಡಿಯಲು ಮನಸ್ಸಿಲ್ಲದವರೂ ಸಂಘ ಪರಿವಾರ ಸೇರಿ. ಮರ್ಡರ್ ಮಾಡಿ ಬಂದ್ರೆ ಸಾಕು ಜೈಲಿನಲ್ಲಿ ನಿಮಗೆ ಎಷ್ಟು ಬೇಕಾದ್ರೂ ಅನ್ನ ಸಿಗುತ್ತದೆ ಅಂತ ಹೇಳಿಕೆ ನೀಡಿದ್ದಾರೆ.

ಧರ್ಮಾರ್ಥ ನಿಮಗೆ ಜೈಲಿನಲ್ಲಿ ಅನ್ನ ಸಿಗುತ್ತದೆ. ಕೊಲೆ ಮಾಡಿಸಿದ ಸಂಘ ಪರಿವಾರದವರು ಜೈಲಿಗೆ ಇಣುಕಿ ನೋಡಲು ಹೋಗುವುದಿಲ್ಲ. ಯಾರಾದ್ರೂ ಹಿಂದುಗಳು ಸತ್ತರೆ ಸಾಕು ವಾಟ್ಸಪ್, ಫೇಸ್ ಬುಕ್ ನಲ್ಲಿ ಸತ್ತವರ ಬಗ್ಗೆ ಪ್ರಚಾರ ಮಾಡ್ತಾರೆ. ಇಷ್ಟು ಕೋಟಿ ಸಂಗ್ರಹ ಆಯ್ತು, ಅಷ್ಟು ಕೋಟಿ ಸಂಗ್ರಹ ಆಯ್ತು ಅಂತ ಪ್ರಚಾರ ಮಾಡುತ್ತಾರೆ. ಆದ್ರೆ ಸಂತ್ರಸ್ತ ಮನೆಯವರಿಗೆ ಒಂದು ರುಪಾಯಿ ಈವರೆಗೆ ಸಿಕ್ಕಿಲ್ಲ. ಎಲ್ಲರೂ ಬಂದು ಹೋದ್ರು, ಯಾರೂ ಏನೂ ಮಾಡಿಲ್ಲ ಅಂತ ಶರತ್ ಮಡಿವಾಳ ತಂದೆ ಹೇಳಿಕೆ ಕೊಟ್ಟಿದ್ದರು. ದೀಪಕ್ ರಾವ್ ಕೊಲೆಯಾದಾಗ್ಲೂ ಕೋಟಿಗಟ್ಟಲೆ ಸಂಗ್ರಹ ಮಾಡಿದ್ದಾರೆ. ದೀಪಕ್ ರಾವ್ ಮನೆಯವರಿಗೆ ಇವತ್ತಿನವರೆಗೂ ಒಂದು ರೂಪಾಯಿ ಸಿಕ್ಕಿಲ್ಲ ಅಂತ ಹೇಳಿದ್ರು.

UDP PRATHIBHA 2

ಹಿಂದೂ ಯುವಕರು ಸತ್ತರೆ ಹಿಂದೂಪರ ಸಂಘಟನೆಗಳು ಸಂಭ್ರಮಿಸುತ್ತವೆ. ಹಲವಾರು ಹಿಂದೂಗಳನ್ನು ಇವರೇ ಕೊಂದಿದ್ದಾರೆ. ನಾನು ಕೂಡಾ ಒಬ್ಬಳು ಹಿಂದೂ. ನನ್ನ ಬಣ್ಣ ಕೂಡಾ ಕೇಸರಿಯೇ. ಆದರೆ ಬಿಜೆಪಿಯವರು ಕೇಸರಿಯನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಭಾಷಣದ ಕೊನೆಗೆ ಪ್ರತಿಭಾ ಕುಳಾಯಿ ವಂದೇ ಮಾತರಂ.. ವಂದೇ ಮಾತರಂ… ಅಂತ ಘೋಷಣೆ ಕೂಗಿದ್ದಾರೆ. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಂದೇ ಮಾತರಂ ಜೈಘೋಷ ಹಾಕಿಸಿದ್ದಾರೆ. ಪ್ರತಿಭಾ ಮಂಗಳೂರಿನ ಸುರತ್ಕಲ್ ವ್ಯಾಪ್ತಿಯ ಕಾರ್ಪೋರೇಟರ್ ಆಗಿದ್ದು, ದೀಪಕ್ ರಾವ್ ಮೃತಪಟ್ಟಾಗ ಬಹಳ ಆಕ್ರೋಶಕ್ಕೆ ಒಳಗಾಗಿದ್ದರು. ಪ್ರತಿಭಾ ಕುಳಾಯಿ ವಿವಾದಾತ್ಮಕ ಭಾಷಣ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

UDP PRATHIBHA 3

UDP PRATHIBHA 1

Share This Article