ಶಿವಮೊಗ್ಗ: ಕೋಣದ ಕಥೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಒಂದು ಕಡೆ ಈ ಕೋಣ ನಮ್ದು, ಈ ಕೋಣ ನಮ್ದು ಎಂದು 2 ಊರಿನ ಜನ ಗುದ್ದಾಡುತ್ತಿದ್ದರೆ, ಮತ್ತೊಂದು ಕಡೆ ಪೊಲೀಸರು ಈ ಕೋಣ ಯಾರದು ಎಂದು ನೀವು ತೀರ್ಮಾನ ಮಾಡಿಕೊಂಡಿಲ್ಲ ಅಂದರೆ ಕೋರ್ಟಿಗೆ ಕಳುಹಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಈ ಕೋಣ ಇದೀಗ ಶಿವಮೊಗ್ಗದ ಗೋಶಾಲೆಗೆ ಸೇರಿದ್ದು, ಕೋಣಕ್ಕಾಗಿ ಎರಡು ಊರಿನ ಜನರ ನಡುವೆ ಇನ್ನೂ ಕಿತ್ತಾಟ ಮುಂದುವರಿದಿದೆ.
Advertisement
ಹೌದು. ಶಿವಮೊಗ್ಗದ ಹಾರನಹಳ್ಳಿ ಹಾಗೂ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಎರಡು ಗ್ರಾಮಗಳ ಗ್ರಾಮಸ್ಥರು ಒಂದು ಕೋಣದ ಹಿಂದೆ ಬಿದ್ದಿರುವ ಪ್ರಸಂಗ ದಿನೇ ದಿನೇ ಹೊಸ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಒಂದೇ ಕೋಣವನ್ನು ಎರಡು ಗ್ರಾಮಸ್ಥರು ನಮ್ಮದೇ ಎಂದು ಹೇಳುತ್ತಿದ್ದು, ಪೊಲೀಸರಿಗೂ ಈ ಕೇಸು ತಲೆಬಿಸಿ ತರಿಸಿದೆ. ಹೀಗಾಗಿ ವಿವಾದಿತ ಕೋಣವನ್ನು ಪೊಲೀಸರು ಗೋ ಶಾಲೆಗೆ ಶಿಫ್ಟ್ ಮಾಡಿದ್ದಾರೆ. ಯಾವ ಊರಿಗೆ ಕೋಣ ಸೇರಿದ್ದು ಎಂದು ತೀರ್ಮಾನ ಆಗುವವರೆಗೂ ಕೋಣ ಗೋಶಾಲೆಯಲ್ಲಿ ಆಶ್ರಯ ಪಡೆಯಲಿದೆ.
Advertisement
Advertisement
ದೇವರ ಹೆಸರಲ್ಲಿ ಬಿಟ್ಟಿರುವ ಕೋಣ ಇದಾಗಿದ್ದು, ಮಾರಿಕಾಂಬೆ ಜಾತ್ರೆಗಾಗಿ ಕೋಣವನ್ನು ಬಿಡಲಾಗಿದೆ. ಆದರೆ ಈ ಕೋಣ ನಮಗೆ ಸೇರಿದ್ದು ಎಂದು ಎರಡು ಗ್ರಾಮಗಳ ಗ್ರಾಮಸ್ಥರು ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗಾಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಗೆಹರಿಸಲು ಪೊಲೀಸರು ಕೂಡ ತಲೆಕೆಡಿಸಿಕೊಂಡಿದ್ದಾರೆ.
Advertisement
ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಗ್ರಾಮದವರು ಕೋಣವನ್ನು ಹೊನ್ನಾಳಿಯಿಂದ ಕರೆದುಕೊಂಡು ಬಂದಿದ್ದಾರೆ. ಎರಡು ವರ್ಷಗಳ ಹಿಂದೆ ಹಾರನಹಳ್ಳಿ ಗ್ರಾಮಸ್ಥರು ದೇವಿಗೆ ಬಿಟ್ಟ ಕೋಣ ನಾಪತ್ತೆಯಾಗಿತ್ತು. ಈಗ ಅದು ಹೊನ್ನಾಳಿಯಲ್ಲಿ ಇದೆ ಎಂದು ಯಾರೋ ತಿಳಿಸಿದ ಕಾರಣ ಅದನ್ನು ಹಾರನಹಳ್ಳಿಗೆ ಕರೆ ತಂದಿದ್ದಾರೆ. ಆದರೆ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮಸ್ಥರು ಈಗ ಇದು ನಮ್ಮ ಊರಿಗೆ ಸೇರಿರುವ ಕೋಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ 5 ದಿನಗಳ ಹಿಂದೆ ಈ ಬಗ್ಗೆ ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ರಾಜಿಪಂಚಾಯ್ತಿ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಇತ್ತ ಹಾರನಹಳ್ಳಿಯಲ್ಲಿರುವ ಕೋಣ ಯಾವ ಊರಿಗೆ ಸೇರಿದ್ದು ಎಂದು ತೀರ್ಮಾನ ಆಗುವವರೆಗೂ ಅದು ಆ ಗ್ರಾಮದಲ್ಲಿ ಇರುವುದು ಬೇಡ ಎಂದು ಬೇಲಿ ಮಲ್ಲೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಕಾರಣದಿಂದಾಗಿ ಪೊಲೀಸರು ಇಂದು ಬೆಳಗ್ಗೆ ಹಾರನಹಳ್ಳಿಯಿಂದ ಶಿವಮೊಗ್ಗದ ಗೋ ಶಾಲೆಗೆ ಕೋಣವನ್ನು ಕರೆ ತಂದಿದ್ದಾರೆ. ಹಾರನಹಳ್ಳಿ, ಬೇಲಿ ಮಲ್ಲೂರು ಗ್ರಾಮಸ್ಥರ ಸಮ್ಮುಖದಲ್ಲಿ ಹೊನ್ನಾಳಿ ಪೊಲೀಸರು ಟಾಟಾ ಏಸ್ ವಾಹನದ ಮೂಲಕ ಶಿವಮೊಗ್ಗಕ್ಕೆ ಕೋಣವನ್ನು ಕರೆ ತಂದಿದ್ದಾರೆ. ಶಿವಮೊಗ್ಗದ ವಿದ್ಯಾ ನಗರದಲ್ಲಿರುವ ಮಹಾವೀರ ಗೋ ಶಾಲೆಯಲ್ಲಿ ಈಗ ಕೋಣವನ್ನು ಬಿಡಲಾಗಿದೆ. ಅದರಂತೆ ಕೋಣವನ್ನು ಗೋ ಶಾಲೆಯವರು ತಮ್ಮ ವಶಕ್ಕೆ ಪಡೆದಿದ್ದಾರೆ. ಕೋಣದ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಗೋ ಶಾಲೆಯಲ್ಲಿರುವ ಇತರೆ ಜಾನುವಾರುಗಳಿಗೆ ಯಾವ ರೀತಿ ಆರೈಕೆ ಮಾಡಲಾಗುತ್ತದೆಯೋ ಅದೇ ರೀತಿ ಈ ಕೋಣಕ್ಕೂ ಆರೈಕೆ ಮಾಡಲಾಗುತ್ತಿದೆ.
ಇದೀಗ ಪೊಲೀಸರ ತೀರ್ಮಾನದಂತೆ ಅವರಿಗೆ ಯಾವಾಗ ಬೇಕೋ ಆಗ ಕೋಣವನ್ನು ಪೊಲೀಸರಿಗೆ ಹಸ್ತಾಂತರಿಸುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಕೋಣದ ನಿರ್ವಹಣಾ ವೆಚ್ಚವಾಗಿ ಎರಡು ಗ್ರಾಮದವರು ಸೇರಿ ಒಂದು ಸಾವಿರ ರೂಪಾಯಿ ಹಣವನ್ನು ಗೋ ಶಾಲೆಗೆ ಕಟ್ಟಿದ್ದಾರೆ. ಆದರೆ ಇನ್ನು ಕೂಡ 2 ಗ್ರಾಮದವರೂ ಕೋಣ ನಮ್ದು ಕೋಣ ನಮ್ದು ಎಂದು ಗುದ್ದಾಡುತ್ತಿದ್ದು, ಇಂದು ಹೊನ್ನಾಳ್ಳಿಯಲ್ಲಿ ನಡೆಯುವ ಇತ್ಯರ್ಥದ ಸಭೆಯಲ್ಲಿ ಯಾವ ರೀತಿ ತೀರ್ಮಾನ ತೆಗೆದುಕೊಳ್ಳಲಾಗುತ್ತೆದೆಯೋ ಅದಕ್ಕೆ ಒಪ್ಪಿಕೊಳ್ಳಲು 2 ಗ್ರಾಮಸ್ಥರು ಕೂಡ ನಿರ್ಧರಿಸಿದ್ದಾರೆ.
ಒಟ್ಟಾರೆ ಕಳೆದ ಐದಾರೂ ದಿನಗಳಿಂದ ಕೋಣದ ಕಥೆ ದಿನೇ ದಿನೇ ಹೊಸ ಹೊಸ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಲೇ ಇದೆ. ಹೊನ್ನಾಳಿ ಪೊಲೀಸರು ಏನಾದರೂ ಮಾಡಿ ಕೇಸು ಬಗೆ ಹರಿಸೋಣ ಎಂದರೆ ಅವರಿಗೂ ಅದು ಸಾಧ್ಯವಾಗುತ್ತಿಲ್ಲ. ಇಂದು ಮತ್ತೆ ಹೊನ್ನಾಳಿ ಠಾಣೆಯಲ್ಲಿ ಎರಡು ಗ್ರಾಮದ ಮುಖಂಡರನ್ನು ಕರೆಸಿ ಮಾತುಕತೆ ನಡೆಸಲಾಗಿದೆ. ಈಗಾಗಲೇ ಡಿಎನ್ ಎ ಪರೀಕ್ಷೆ ನಡೆಸುವುದಾಗಿ ಪೊಲೀಸರು ಸಹ ಹೇಳಿದ್ದರೂ ದೇವರ ಕೋಣ ಮುಕ್ಕಾಗುವುದೆಂಬ ಕಾರಣದಿಂದ ಅವರು ಕೂಡ ಗ್ರಾಮಸ್ಥರೇ ಬಗೆಹರಿಸಿಕೊಳ್ಳಲಿ ಎಂದು ರಿಯಾಯಿತಿ ನೀಡಿದ್ದಾರೆ.
https://www.youtube.com/watch?v=o-Wz15jXv3A