– ಇದರಿಂದ ಆಗುವ ಅನಾನುಕೂಲಗಳು ಯಾವುವು?
ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಅಧ್ಯಯನ ಅಥವಾ ಓದು ಮುಗಿಸಿದ ಬಳಿಕ ಉತ್ತಮವಾದ ಉದ್ಯೋಗ ಪಡೆಯಲು ಬಯಸುತ್ತಾನೆ. ಆರಂಭದಲ್ಲಿ ಕೆಲವೊಮ್ಮೆ ನಾವು ಇಷ್ಟಪಡುವಂತಹ ಕೆಲಸ ದಕ್ಕುವುದಿಲ್ಲ. ಒಂದು ವೇಳೆ ಸಿಕ್ಕರೂ ನಿಜವಾದ ಸವಾಲು ಆನಂತರ ಆರಂಭವಾಗುತ್ತದೆ. ಇಂತಹ ಸವಾಲುಗಳು ಚೀನಾದಲ್ಲಿ ಸಾಮಾನ್ಯವಾಗಿದ್ದು, ‘996 ವರ್ಕ್ ಕಲ್ಚರ್’ (996 Work Culture) ಎಂಬ ಗಲಾಟೆಯೇ ಎದ್ದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕರಿಗೆ ಈ ರೀತಿಯ ಕೆಲಸದ ಸಂಸ್ಕೃತಿಯ ಬಗ್ಗೆ ತಿಳಿದಿರುವುದಿಲ್ಲ. ಆದರೆ ಚೀನಾದಲ್ಲಿ ಈ ಕೆಲಸ ಸಂಸ್ಕೃತಿಯ ಇದೀಗ ದೊಡ್ಡ ಅಭಿಯಾನವೇ ಆರಂಭವಾಗಿದೆ. ‘996 ಕೆಲಸದ ಸಂಸ್ಕೃತಿ’ ವಿರುದ್ಧದ ಅಭಿಯಾನದಲ್ಲಿ 5000 ಕ್ಕೂ ಹೆಚ್ಚು ಉದ್ಯೋಗಿಗಳಳು ಸೇರಿದ್ದಾರೆ. ಹಾಗಾದರೆ ಚೀನಾದ ಉದ್ಯೋಗಿಗಳ ಕಣ್ಣು ಕೆಂಪಾಗಿಸಿದ ಈ ‘996 ಕೆಲಸದ ಸಂಸ್ಕೃತಿ’ ಅಂದ್ರೆ ಏನು ಎಂಬುದನ್ನು ನೋಡೋಣ.
‘996 ವರ್ಕ್ ಕಲ್ಚರ್’ ಎಂದರೇನು?: ವಾಸ್ತವವಾಗಿ, ‘996’ ಕೆಲಸದ ಸಂಸ್ಕೃತಿಯು ಚೀನಾದ ಖಾಸಗಿ ಕಂಪನಿಗಳಲ್ಲಿ, ವಿಶೇಷವಾಗಿ ಟೆಕ್ ಉದ್ಯಮದಲ್ಲಿ ಪ್ರಚಲಿತವಾಗಿದೆ. ಇದರ ಅಡಿಯಲ್ಲಿ ನೌಕರರು ವಾರದಲ್ಲಿ 6 ದಿನ, ಪ್ರತಿ ದಿನ 12 ಗಂಟೆ ಕೆಲಸ ಮಾಡಬೇಕು. ಈ ಕೆಲಸದ ಸಂಸ್ಕೃತಿಯನ್ನು ಚೀನಾದಲ್ಲಿ ಬಹಳ ಹಿಂದಿನಿಂದಲೂ ವಿರೋಧಿಸಲಾಗುತ್ತಿದೆ. ಆದರೆ ಖಾಸಗಿ ಕಂಪನಿಗಳು ಉದ್ಯೋಗಿಗಳ ಶೋಷಣೆಗೆ ಹಲವು ಬಾರಿ ವರದಿಯಾಗಿದೆ. ಈ ಕಂಪನಿಗಳು ಉದ್ಯೋಗಿಗಳಿಗೆ ವಾರದಲ್ಲಿ ಒಂದು ರಜೆಯನ್ನು ಮಾತ್ರ ನೀಡುತ್ತವೆ. ಇದು ‘996 ವರ್ಕ್ ಕಲ್ಚರ್’ ಆಗಿದ್ದು, ಇದರಿಂದ ಚೀನಾದಲ್ಲಿ ಉದ್ಯೋಗಿಗಳ ಆಕ್ರೋಶ ಹೆಚ್ಚಾಗುತ್ತಿದೆ. ಇದರ ವಿರುದ್ಧ ಈಗ ಧ್ವನಿ ಎತ್ತುತ್ತಿದ್ದು, ‘ವರ್ಕರ್ ಲೈವ್ಸ್ ಮ್ಯಾಟರ್’ ಎಂಬ ಆನ್‌ಲೈನ್ ಅಭಿಯಾನವನ್ನು ನಡೆಸಲಾಗುತ್ತಿದೆ.
Advertisement
Advertisement
12 ಗಂಟೆ ಕೆಲಸ: ಚೀನಾದಲ್ಲಿ ಕೆಲಸದ ಅವಧಿಯನ್ನು ‘996’ ಎಂದು ಏಕೆ ಕರೆಯಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ನೌಕರರು ವಾರದಲ್ಲಿ 6 ದಿನ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಕೆಲಸ ಮಾಡುತ್ತಾರೆ. ‘996 ಕೆಲಸದ ಸಂಸ್ಕೃತಿ’ ವಿರುದ್ಧ ಆರಂಭಿಸಿರುವ ಅಭಿಯಾನದಲ್ಲಿ ಉದ್ಯೋಗಿಗಳು ತಮ್ಮ ಕೆಲಸದ ಸಮಯವನ್ನು ಆನ್‌ಲೈನ್ ಸ್ಪ್ರೆಡ್‌ಶೀಟ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂದಹಾಗೆ ‘996’ ಕಚೇರಿ ಸಂಸ್ಕೃತಿಯ ವಿಷಯವು ಚೀನಾದಲ್ಲಿ ವರ್ಷಗಳಿಂದ ವಿವಾದಕ್ಕೀಡಾಗಿದೆ. ಖಾಸಗಿ ಸಂಸ್ಥೆಗಳಲ್ಲಿ ನೌಕರರು ವಾರಕ್ಕೆ 72 ಗಂಟೆ ಕೆಲಸ ಮಾಡಬೇಕಾಗಿದ್ದು, ಇದನ್ನು ಇಲ್ಲಿನ ಜನ ಅಮಾನವೀಯ ಎನ್ನುತ್ತಿದ್ದಾರೆ.
Advertisement
ಸಿಡಿದೆದ್ದ ಉದ್ಯೋಗಿಗಳು: 996 ವರ್ಕ್ ಮಾಡೆಲ್ ವಿರುದ್ಧ ಇದೀಗ ಚೀನಾ ಯುವ ಸಮೂಹ ವಿಭಿನ್ನವಾಗಿ ದನಿ ಎತ್ತಿದೆ. ‘996’ ಕೆಲಸದ ಸಂಸ್ಕೃತಿಯನ್ನು ವಿರೋಧಿಸಿ ಚೀನಾದ ಯುವಕರು ಮತ್ತು ಯುವತಿಯರು ಪಕ್ಷಿಗಳಂತೆ ವೇಷ ಧರಿಸಿ ವೀಡಿಯೊಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಯುವಕರು, ಯುವತಿಯರು ತಮ್ಮ ದೇಹವನ್ನು ದೊಡ್ಡ ಗಾತ್ರದ ಟೀ-ಶರ್ಟ್‍ಗಳಲ್ಲಿ ಹುದುಗಿಸಿಕೊಂಡು, ಕುರ್ಚಿ ಮೇಲೆ ಕುಳಿತುಕೊಂಡು ಹಕ್ಕಿಗಳಂತೆ ವರ್ತಿಸ್ತಿದ್ದಾರೆ. ತಮಗೂ ಪಕ್ಷಿಗಳ ರೀತಿಯ ಸ್ವಾತಂತ್ರ್ಯ ಬೇಕು ಎಂಬ ಕೂಗೆಬ್ಬಿಸ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಿಸಿದ ದೃಶ್ಯಗಳು ವೈರಲ್ ಆಗಿವೆ. ಈ ಅಭಿಯಾನಕ್ಕೆ ಯುವ ಪೀಳಿಗೆ ಅಪಾರ ಬೆಂಬಲವನ್ನು ಪಡೆಯುತ್ತಿದ್ದಾರೆ.
Advertisement
ಆದಾಗ್ಯೂ, ಚೀನಾದ ಯುವಕರು ಸಾಮಾಜಿಕ ಮಾಧ್ಯಮದಲ್ಲಿ ದೇಶದ ‘996’ ಕೆಲಸದ ಸಂಸ್ಕೃತಿಯ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿರುವುದು ಇದೇ ಮೊದಲಲ್ಲ. 2022 ರಲ್ಲಿ, ‘ಬಾಯಿ ಲ್ಯಾನ್’ (ಕೊಳೆಯಲಿ) ಎಂಬ ಪದವು ವ್ಯಾಪಕವಾಗಿ ಬಳಸಲಾರಂಭಿಸಿತು. 2021 ರಲ್ಲಿ, ‘996’ ವಿರುದ್ಧ ಚೀನಾದಲ್ಲಿ ‘ವರ್ಕರ್ ಲೈವ್ಸ್ ಮ್ಯಾಟರ್’ ಎಂಬ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಲಾಯಿತು. ಆದರೆ ಇದರ ನಂತರವೂ ಈ ರೀತಿಯ ಶೋಷಣೆ ನಡೆಯುತ್ತಿದೆ ಮತ್ತು ಚೀನಾದ ಜನರು ವಾರಕ್ಕೆ 72 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿದೆ.
ಕೇವಲ 8 ಗಂಟೆ ಕೆಲಸ ಮಾಡಲು ಕಾನೂನು: ಚೀನಾ ಸರ್ಕಾರ ಕೆಲಸಕ್ಕೆ ಸಂಬಂಧಿಸಿದಂತೆ ಕಾನೂನನ್ನು ಮಾಡಿದೆ. ಅದರ ಪ್ರಕಾರ, ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಾರದಲ್ಲಿ ಗರಿಷ್ಠ 44 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬಹುದು. ಆದರೆ ಇದಾದ ನಂತರವೂ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಓವರ್‌ಟೈಮ್ ಹೆಸರಿನಲ್ಲಿ 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಮಾಡುತ್ತವೆ. ಈ ಬಗ್ಗೆ ಚೀನಾ ಸರ್ಕಾರ ಹಲವಾರು ಬಾರಿ ಖಾಸಗಿ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದರೂ ಸಹ ನೌಕರರನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ.
‘996’ ಅನ್ನು ಬೆಂಬಲಿಸಿದ್ದ ಜಾಕ್ ಮಾ: ಒಂದು ಸಮಯದಲ್ಲಿ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಸಹ ‘996’ ಕೆಲಸದ ಸಂಸ್ಕೃತಿಯನ್ನು ಬೆಂಬಲಿಸಿದ್ದರು. ಆಗ ಜಾಕ್ ಮಾ ಅವರು 996 ಕೆಲಸದ ಸಂಸ್ಕೃತಿ ವರದಾನಕ್ಕಿಂತ ಕಡಿಮೆಯಿಲ್ಲ ಮತ್ತು ಕೇವಲ 8 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಅಲಿಬಾಬಾದಲ್ಲಿ ಸ್ಥಾನವಿಲ್ಲ ಎಂದು ಹೇಳಿದ್ದರು.
ಅನಾನುಕೂಲಗಳು ಯಾವುವು?: ದೀರ್ಘ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಹಲವಾರು ಅನಾನುಕೂಲತೆಗಳಿವೆ. ಚೀನಾವನ್ನು ಹೊರತುಪಡಿಸಿ, ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವ ಜನರು ಸಾವಿನ ಅಪಾಯವನ್ನು ಹೊಂದಿರುತ್ತಾರೆ. ಪ್ರತಿ ವರ್ಷ 7 ಲಕ್ಷ 45 ಸಾವಿರ ಜನರು ಪಾರ್ಶ್ವವಾಯು ಅಥವಾ ಹೃದಯಾಘಾತದಿಂದ ಸಾಯುತ್ತಾರೆ. ಆಗ್ನೇಯ ಏಷ್ಯಾದಲ್ಲಿ ಈ ಅಂಕಿ ಅಂಶವು ಅತ್ಯಧಿಕವಾಗಿದೆ. ಅಲ್ಲಿ 55 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವ 3 ಲಕ್ಷಕ್ಕೂ ಹೆಚ್ಚು ಜನರು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಕಾಯಿಲೆಗಳಿಂದ ಸಾಯುತ್ತಾರೆ.
ಕೆಲವು ದೇಶಗಳಲ್ಲಿ 4 ದಿನಗಳ ವಾರದ ಸಂಸ್ಕೃತಿಯನ್ನು ಸಹ ಅಳವಡಿಸಿಕೊಳ್ಳಲಾಗುತ್ತಿದೆ. ನೀವು ದಿನಕ್ಕೆ 7-8 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ, ನಿಮ್ಮ ದೇಹಕ್ಕೆ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ ಮತ್ತು ಇದು ಹೆಚ್ಚಿದ ಒತ್ತಡ, ಆಯಾಸ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದರಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ನಿದ್ರಾಹೀನತೆ ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತವೆ.
ಅಂಕಿ-ಅಂಶಗಳು: ಪಶ್ಚಿಮ ಪೆಸಿಫಿಕ್ ಮಹಾಸಾಗರದ ಪ್ರದೇಶಗಳಲ್ಲಿ ಈ ಅಂಕಿ ಅಂಶವು 2 ಲಕ್ಷಕ್ಕಿಂತ ಹೆಚ್ಚಿದ್ದರೆ, ಪೂರ್ವ ಮೆಡಿಟರೇನಿಯನ್ ಪ್ರದೇಶಗಳಲ್ಲಿ 77 ಸಾವಿರ, ಯುರೋಪ್ ನಲ್ಲಿ 57 ಸಾವಿರ, ಅಮೆರಿಕದಲ್ಲಿ 43 ಸಾವಿರ ಮತ್ತು ಆಫ್ರಿಕಾದಲ್ಲಿ 40 ಸಾವಿರ ಮಂದಿ ನಿಗದಿತ ಸಮಯಕ್ಕಿಂತ ಹೆಚ್ಚು ಗಂಟೆ ಕೆಲಸ ಮಾಡಿದ್ದರಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸುದೀರ್ಘ ಕೆಲಸದ ಅವಧಿಯಿಂದ ಜನರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮ ಒತ್ತಡವನ್ನು ಕಡಿಮೆ ಮಾಡಲು ವ್ಯಾಯಾಮ ಮಾಡುವುದಿಲ್ಲ ಅಥವಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದಿಲ್ಲ. ಇದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಮತ್ತು ಅನಾರೋಗ್ಯದ ಸಂದರ್ಭದಲ್ಲಿ, ಅವರು ಸಾಕಷ್ಟು ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ.
ಪ್ರಪಂಚದ ಹಲವು ದೇಶಗಳಲ್ಲಿ ಕೆಲಸದ ಸಮಯದ ಬಗ್ಗೆಯೂ ಬದಲಾವಣೆಗಳಾಗಿವೆ. ಜರ್ಮನಿಯಲ್ಲಿ ವಾರದಲ್ಲಿ 4 ದಿನಗಳ ಕೆಲಸ ಮತ್ತು 3 ದಿನಗಳ ವಿಶ್ರಾಂತಿಯ ಮಾದರಿಯನ್ನು ಪರಿಗಣಿಸಲಾಗುತ್ತಿದೆ. ಇದರಿಂದಾಗಿ ನೌಕರರು ವಾರಾಂತ್ಯದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಬಹುದಾಗಿದೆ. ಆದರೆ ಉದ್ಯೋಗಿಗಳನ್ನು ಹೆಚ್ಚು ಸಮಯ ಕೆಲಸ ಮಾಡುವಂತೆ ಒತ್ತಾಯಿಸುವ ಹಲವು ದೇಶಗಳಿವೆ. ಯುಎಇಯಲ್ಲಿನ ಉದ್ಯೋಗಿಗಳು ವಾರಕ್ಕೆ 52 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು. ಭಾರತದಲ್ಲಿ ನೌಕರರು ವಾರಕ್ಕೆ 45 ರಿಂದ 48 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅಮೆರಿಕದಲ್ಲಿ ಜನರು 36 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಜರ್ಮನಿಯಲ್ಲಿನ ಉದ್ಯೋಗಿಗಳು ಪ್ರತಿ ವಾರ ಕೇವಲ 34 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
ಭಾರತಕ್ಕೆ ಸಲಹೆ ನೀಡಿದ್ದ ನಾರಾಯಣಮೂರ್ತಿ: ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಕಳೆದ ವರ್ಷ ವಾರಕ್ಕೆ 70 ಗಂಟೆಗಳ ಕೆಲಸವನ್ನು ಪ್ರತಿಪಾದಿಸಿದ್ದರು. ಅಲ್ಲದೇ ಯುವಕರಿಗೆ ಹೆಚ್ಚು ಕೆಲಸ ಮಾಡಲು ಸಲಹೆ ನೀಡಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು. 2023 ರ ಅಕ್ಟೋಬರ್ ನಲ್ಲಿ ನಾರಾಯಣ ಮೂರ್ತಿ ಅವರು ಪಾಡ್‌ಕ್ಯಾಸ್ಟ್‌ನಲ್ಲಿ ಭಾರತದ ಕೆಲಸದ ಉತ್ಪಾದಕತೆ ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಹೇಳಿದಾಗ ಇದ್ದಕ್ಕಿದ್ದಂತೆ ಬೆಳಕಿಗೆ ಬಂದರು. ಚೀನಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು, ಭಾರತೀಯ ಯುವಕರು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು.