ಮಂಗಳೂರು: ಸಚಿವ ಈಶ್ವರಪ್ಪ ಅವರು ರಾಜೀನಾಮೆ ನೀಡುವ ವಿಚಾರದ ಬಗ್ಗೆ ಅವರನ್ನು ಮುಖಾಮುಖಿ ಭೇಟಿಯಾದ ನಂತರ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಏನಾಗಿದೆ ಎಂದು ಗೊತ್ತಿಲ್ಲ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರದ ಬಗ್ಗೆ ಹೈಕಮಾಂಡ್‍ಗೂ ಎಲ್ಲಾ ವಿಚಾರ ಗೊತ್ತಿದೆ. ನಾನು ಕೂಡ ಹೇಳಿದ್ದೇನೆ, ಅವರಿಗೂ ಗೊತ್ತಿದೆ ಎಂದು ತಿಳಿಸಿದರು.
Advertisement
Advertisement
ಈಶ್ವರಪ್ಪ ವಿರುದ್ಧ ಎಫ್‍ಐಆರ್ ಆಗಿದೆ. ಈ ಬಗ್ಗೆ ಎಲ್ಲಾ ವಿವರಗಳನ್ನು ಪಡೆದುಕೊಂಡಿದ್ದೇನೆ. ಈ ಬಗ್ಗೆ ಈಶ್ವರಪ್ಪ ಅವರ ಹತ್ತಿರ ಮಾತನಾಡುತ್ತೇನೆ. ಫೋನ್‍ನಲ್ಲೂ ಕೆಲವು ವಿಚಾರ ಮಾತನಾಡಿದ್ದೇನೆ. ಅವರನ್ನು ಕರೆಸಿಯೂ ಕೆಲವು ವಿಚಾರವನ್ನು ಮತ್ತೆ ಮಾತನಾಡುತ್ತೇನೆ ಎಂದು ಹೇಳಿದರು.
Advertisement
ಈಶ್ವರಪ್ಪ ರಾಜೀನಾಮೆ ನೀಡುವುದರ ಬಗ್ಗೆ ಹೈಕಮಾಂಡ್ ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ಒನ್ ಟು ಒನ್ ಮಾತನಾಡಿದರೆ ಸ್ಪಷ್ಟವಾಗುತ್ತದೆ. ಘಟನೆಯ ಕುರಿತು ಹಾಗೂ ಎಫ್‍ಐಆರ್ ಆದ ನಂತರ ಏನಾಗಿದೆ ಎನ್ನುವುದರ ಕುರಿತು ಮುಖಾಮುಖಿ ಭೇಟಿಯಾಗಿ ಮಾತನಾಡುತ್ತೇನೆ. ವಿರೋಧ ಪಕ್ಷದವರು ಇದರಲ್ಲಿ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ತನಿಖೆ ನಂತರ ಸತ್ಯಾಂಶ ಹೊರಗೆ ಬರುತ್ತದೆ. ತನಿಖೆಯಲ್ಲಿ ಯಾರು ಇದರಲ್ಲಿ ಪಾತ್ರ ವಹಿಸಿದ್ದಾರೆ, ಮತ್ತು ಇದರ ಹಿನ್ನೆಲೆ ಏನು ಎನ್ನುವ ಎಲ್ಲಾ ಅಂಶಗಳು ಗೊತ್ತಾಗುತ್ತದೆ. ಕಾನೂನು ಪ್ರಕಾರ ತನಿಖೆ ನಡೆಯುತ್ತದೆ, ನಾವು ಹಸ್ತಕ್ಷೇಪ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ಕೊಡಬಾರದು: ಸಚಿವ ನಿರಾಣಿ
ಸದ್ಯ ಮೈಸೂರಿನಲ್ಲಿರುವ ಸಚಿವ ಈಶ್ವರಪ್ಪ ಅವರು ಬೆಂಗಳೂರಿಗೆ ತೆರಳಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಆಗಲಿದ್ದಾರೆ. ನಂತರ ಮಧ್ಯಾಹ್ನ ಕೆ.ಎಸ್. ಈಶ್ವರಪ್ಪ ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಪಕ್ಷಕ್ಕೆ ಮುಜುಗರ ತರಿಸಲ್ಲ, ರಾಜೀನಾಮೆ ಕೊಡ್ತೀನಿ: ಈಶ್ವರಪ್ಪ