ಬಾಗಲಕೋಟೆ: ನಗರದಲ್ಲಿ ಯಾವುದೇ ಅನುಮತಿಯಿಲ್ಲದೆ ಎಲ್ಲೆಂದರಲ್ಲಿ ಮಸೀದಿಗಳ (Mosques) ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಈಗ ಮತ್ತೆ ಹಿಂದುಪರ ಸಂಘಟನೆ (Hindu Organisations) ಕಾರ್ಯಕರ್ತರು ಹಾಗೂ ಬಿಜೆಪಿ(BJP) ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದಾರೆ.
ಬಾಗಲಕೋಟೆ ವಾರ್ಡ್ ನಂ.1ರಲ್ಲಿ ನಡೆಯುತ್ತಿರುವ ಮಸೀದಿ ನಿರ್ಮಾಣ ಕಾಮಗಾರಿಗೆ ನಗರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ. ನಗರಸಭೆ ಆಯುಕ್ತರು ಹಾಗೂ ಪೊಲೀಸರ ವಿರುದ್ದ ಧಿಕ್ಕಾರ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿನ ಅನಧಿಕೃತ ಮಸೀದಿ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಇಲ್ಲದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕುರ್ಚಿ ಕಿತ್ತಾಟದ ಮಧ್ಯೆ ಬೆಳಗಾವಿಯಲ್ಲೂ ಡಿನ್ನರ್ ಪಾಲಿಟಿಕ್ಸ್
ಹಳೆ ಬಾಗಲಕೋಟೆ ಹಾಗೂ ನವನಗರ ಎರಡು ಕಡೆ 20ಕ್ಕೂ ಅಧಿಕ ಮಸೀದಿಗಳನ್ನು ಅನಧಿಕೃತವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ.. ಖಾಸಗಿ ಭೂಮಿಯಲ್ಲಿ ಮಸೀದಿ ನಿರ್ಮಾಣ ಮಾಡಬೇಕಾದರೂ ಅನುಮತಿ ಕಡ್ಡಾಯ. ಆದರೆ ಇಲ್ಲಿ ಯಾವುದೇ ಸ್ಥಳದಲ್ಲಿ ಮಸೀದಿ ಕಟ್ಟುತ್ತಿದ್ದರೂ ಅದಕ್ಕೆ ಅನುಮತಿ ಪಡೆಯುತ್ತಿಲ್ಲ. ಇನ್ನೊಂದು ಕಡೆ ಇದೆಲ್ಲ ಗೊತ್ತಿದ್ದರೂ ನಗರಸಭೆ ಆಯುಕ್ತರು, ಸಿಬ್ಬಂದಿ ಕಂಡು ಕಾಣದಂತಿರುತ್ತಾರೆಂಬ ಆರೋಪ ಕೇಳಿಬಂದಿದೆ.
ಮಸೀದಿಗಳ ನಿರ್ಮಾಣದ ಬಗ್ಗೆ ನಗರಸಭೆ ಬಿಜೆಪಿ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿದೆ. ಇನ್ನು ಈ ಬಗ್ಗೆ ನಗರಸಭೆ ಆಯುಕ್ತ ವಾಸಣ್ಣ ಅವರನ್ನು ಕೇಳಿದರೆ, ನಾವು ಈ ಬಗ್ಗೆ ಯಾವುದೇ ಅನುಮತಿ ಕೊಟ್ಟಿಲ್ಲ. ಈ ಬಗ್ಗೆ ನೋಟಿಸ್ ಕೊಟ್ಟಿದ್ದೇವೆ. ಈಗಲೂ ನಾವು ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

