ವಿಜಯಪುರ: ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ಸಿಎಂ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಆದರೆ ವಿಜಯಪುರದ ಜಿಲ್ಲಾ ಪಂಚಾಯತ್‍ನ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಮೇಟಿ ಇಂದು ನಡೆಯಬೇಕಿದ್ದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯನ್ನು ಛಟ್ಟಿ ಅಮವಾಸ್ಯೆ ಹಿನ್ನೆಲೆಯಲ್ಲಿ ಮುಂದೂಡಿ ಮೌಢ್ಯಕ್ಕೆ ಜೈ ಎಂದಿದ್ದಾರೆ.
ಎಲ್ಲ ಸದಸ್ಯರು ಅಮವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಹೋಗಬೇಕೆಂದು ಒತ್ತಡ ಹಾಕಿದ್ದರಿಂದ ಇಂದು ನಿಗದಿಯಾಗಿದ್ದ ಸಾಮಾನ್ಯ ಸಭೆಯನ್ನು ನವೆಂಬರ್ 28ಕ್ಕೆ ಮುಂದೂಡಲಾಗಿದೆ. ಜಿಲ್ಲಾ ಪಂಚಾಯ್ತಿ ಆಡಳಿತದ ಈ ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಆದರೆ ಜಿಲ್ಲಾ ಪಂಚಾಯ್ತಿ ಸದಸ್ಯರು ತಮ್ಮ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಇಂದು ನಡೆಯಬೇಕಿದ್ದ ಸಭೆಯನ್ನು ಅಮವಾಸ್ಯೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಸಾಮನ್ಯ ಸಭೆ ಆಯೋಜಿಸುವ ಮುಖ್ಯ ಯೋಜನಾಧಿಕಾರಿ ಕಚೇರಿ ಸಿಬ್ಬಂದಿಯಿಂದ ಫೋನ್ ಬಂದಿತ್ತು ಎಂದು ಕಾಂಗ್ರೆಸ್ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
Advertisement
Advertisement
ಅಧ್ಯಕ್ಷರು ಯಾವ ಸದಸ್ಯರೊಂದಿಗೆ ಚರ್ಚಿಸದೇ ಸಾಮನ್ಯ ಸಭೆಯ ದಿನಾಂಕವನ್ನು ಅಮವಾಸ್ಯೆಯಂದು ನಿರ್ಧರಿಸಿದ್ದರು. ಅಮವಾಸ್ಯೆಯ ದಿನ ನಾವು ಸಭೆಗೆ ಹಾಜರಾಗಲ್ಲ ಎಂದು ವಿರೋಧ ಮಾಡಲಾಯಿತು. ಹೆಚ್ಚಿನ ಸದಸ್ಯರು ಮನೆದೇವರ ದರ್ಶನಕ್ಕಾಗಿ ತೆರಳುತ್ತಿರುವುದರಿಂದ ಕೊನೆ ಕ್ಷಣದಲ್ಲಿ ಸಭೆಯ ದಿನಾಂಕವನ್ನು ಬದಲಿಸಲಾಯಿತು ಎಂದು ಕನಮಡಿ ಜಿ.ಪಂ. ಕ್ಷೇತ್ರದ ಬಿಜೆಪಿ ಸದಸ್ಯ ಸಾಬು ಮಾಶ್ಯಾಳ ತಿಳಿಸಿದ್ದಾರೆ.
Advertisement
ಸಾಮಾನ್ಯ ಸಭೆ ಮುಂದೂಡಿದ್ದು ಮೂರ್ಖತನದ ಪರಮಾವಧಿ. ವೈಜ್ಞಾನಿಕ ಯುಗದಲ್ಲೂ ಜನಪ್ರತಿನಿಧಿಗಳು ಹೀಗೆ ಮಾಡುವುದು ಸರಿಯಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಂದಿಗೂ ಮೌಢ್ಯತೆಯನ್ನು ಇಷ್ಟು ಬಲವಾಗಿ ನಂಬಿರುವುದು ದುರಂತವಾಗಿದೆ ಎಂದು ಎಐಡಿಎಸ್‍ಒ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎಚ್.ಟಿ. ಭರತ್‍ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಒಂದೆಡೆ ರಾಜ್ಯ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸಿದ್ಧತೆಯನ್ನು ನಡೆಸಿದೆ. ಈ ಸಮಯದಲ್ಲಿ ಕಾಂಗ್ರೆಸ್ ಸರ್ಕಾರದ ಸದಸ್ಯರು ಈ ರೀತಿಯ ಮೌಢ್ಯಕ್ಕೆ ಜೈ ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. ಒಂದು ವೇಳೆ ಅಮಾವಸ್ಯೆಯ ದಿನ ದೇವಸ್ಥಾನಗಳಿಗೆ ಹೋಗುವುದಿದ್ದರೆ ಮೊದಲೇ ಎಲ್ಲಾ ಜಿಲ್ಲಾ ಪಂಚಾಯ್ತಿ ಸದಸ್ಯರ ಸಹಮತದ ಮೇರೆಗೆ ದಿನಾಂಕವನ್ನು ನಿಗದಿ ಮಾಡಬೇಕಾಗಿತ್ತು. ಏಕಾಏಕಿ ಅಮಾವಸ್ಯೆಯ ಕಾರಣ ಹೇಳಿ ಸಭೆಯ ದಿನಾಂಕವನ್ನು ಕೊನೆ ಕ್ಷಣದಲ್ಲಿ ಬದಲಾಯಿಸುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ.