ಕಲಬುರಗಿ: ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ಪ್ರಶ್ನೆ ಪತ್ರಿಕೆಯ ಪರೀಕ್ಷೆಯಲ್ಲಿ ಬದಲಿ ವಿದ್ಯಾರ್ಥಿನಿಯಾಗಿ ಪರೀಕ್ಷೆ ಬರೆದ ಕಾಂಗ್ರೆಸ್ ಕಾರ್ಯಕರ್ತೆ ಸಂಪೂರ್ಣ ಪಾಟೀಲ್ ಅವರನ್ನು ಇಲ್ಲಿನ 4ನೇ ಜೆಎಂಎಫ್‌ಸಿ ನ್ಯಾಯಾಲಯ ಎರಡು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.
ಕಲಬುರಗಿ ನಗರದ ಮಿಲಿಂದ್ ಶಾಲೆಯಲ್ಲಿ ಅರ್ಚನಾ ಎಂಬ ಬಾಲಕಿಯ ಬದಲಿಗೆ ಅಕ್ರಮವಾಗಿ ಸಂಪೂರ್ಣ ಬರೆಯುತ್ತಿರುವುದನ್ನು ದಲಿತ ಸೇನೆ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಿಸಿತ್ತು. ತಕ್ಷಣ ಪೊಲೀಸರು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು.
ಹಾಗಾಗಿ, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಆರೋಪಿಯನ್ನು ಎರಡು ದಿನಗಳ ಮಟ್ಟಿಗೆ ಪೊಲೀಸ್ ವಶಕ್ಕೆ ನೀಡಿದೆ. ಘಟನೆ ಕುರಿತಂತೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ.