ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೆ ಕಾರಣರಾದ ಗೃಹ ಸಚಿವ ಅಮಿತ್ ಶಾ ಅವರು ಯಾವುದೇ ಕಾರಣಕ್ಕೂ ಮಂಗಳೂರಿಗೆ ಆಗಮಿಸಬಾರದು. ಒಂದು ವೇಳೆ ಆಗಮಿಸಿದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಅಲ್ಲದೆ ನಾನು ಉಪವಾಸ ಕೂರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಎಚ್ಚರಿಕೆ ನೀಡಿದ್ದಾರೆ.
ಹಿಂಸಾಚಾರ, ಗೋಲಿಬಾರ್ ಬಳಿಕ ಮಂಗಳೂರು ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದರ ನಡುವೆ ಅಮಿತ್ ಶಾ ಆಗಮಿಸಿ, ಮತ್ತೆ ತೊಂದರೆ ಮಾಡುವುದು ಬೇಡ. ಹೀಗಾಗಿ ಅಮಿತ್ ಶಾ ಸದ್ಯದ ಮಟ್ಟಿಗೆ ಯಾವುದೇ ಕಾರಣಕ್ಕೂ ಮಂಗಳೂರಿಗೆ ಬರಬಾರದು ಎಂದು ಆಗ್ರಹಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಮಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಇದಕ್ಕಾಗಿ ಸಂಘ ಪರಿವಾರ ಹಾಗೂ ಬಿಜೆಪಿ ಸಿದ್ಧತೆ ಮಾಡಿಕೊಂಡಿವೆ. ಜನವರಿ 19ರಂದು ನಡೆಯುವ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಮಿತ್ ಶಾ ಸಭೆಗೆ ಅನುಮತಿ ಕೊಡಬಾರದು. ಇದನ್ನು ಮೀರಿ ಅನುಮತಿ ಕೊಟ್ಟು ಅಮಿತ್ ಶಾ ಆಗಮಿಸಿದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ಅಮಿತ್ ಶಾ ಮಂಗಳೂರಿಗೆ ಬಂದರೆ ಅಶಾಂತಿ ವಾತಾವರಣ ನಿರ್ಮಾಣವಾಗುತ್ತದೆ. ಹೀಗಾಗಿ ಅಮಿತ್ ಶಾ ಅವರ ಮಂಗಳೂರಿನ ಸಭೆಯನ್ನು ಮುಂದಕ್ಕೆ ಹಾಕಬೇಕು ಎಂದು ಡಿಸೋಜಾ ಒತ್ತಾಯಿಸಿದ್ದಾರೆ.