ರಾಯಚೂರು: ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣ ಚುನಾವಣೆಗೆ ಪರೋಕ್ಷವಾಗಿ ಸಣ್ಣ ಪ್ರಮಾಣದ ಪ್ರಭಾವ ಬೀರುತ್ತದೆ. ಆದರೆ ಕಾಂಗ್ರೆಸ್ (Congress) ಇದನ್ನು ಇಡೀ ಎನ್‌ಡಿಎ (NDA) ಅಪರಾಧ ಎಂಬ ಥರ ಬಿಂಬಿಸುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ (CT Ravi) ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ರಾಯಚೂರಿನ (Raichur) ಸಿಂಧನೂರಿನಲ್ಲಿ ಮಾತನಾಡಿದ ಅವರು, ಪ್ರಾಥಮಿಕ ತನಿಖೆ ನಂತರ ಸತ್ಯಾಸತ್ಯತೆ ಹೊರ ಬರುತ್ತದೆ. ಸರ್ಕಾರವೇ ಎಸ್‌ಐಟಿ (SIT) ರಚನೆ ಮಾಡಿದೆ, ತನಿಖೆಯಾಗಲಿ. ಇದಕ್ಕೆ ಸಂಬಂಧಪಟ್ಟಂತೆ ಹೆಚ್‌ಡಿಕೆ ಹೇಳಿಕೆಯನ್ನು ಒಪ್ಪುತ್ತೇವೆ ಎಂದರು.
ಈ ನೆಲದ ಕಾನೂನು ಒಬ್ಬರಿಗೊಂದು ಇನ್ನೊಬ್ಬರಿಗೊಂದು ಇಲ್ಲ. ಎಲ್ಲರಿಗೂ ಒಂದೇ ರೀತಿ ಅಪ್ಲೈ ಆಗುತ್ತೆ. ತನಿಖೆಗೂ ಮುಂಚೆ ನಾವು ಯಾರನ್ನೂ ಅಪರಾಧಿ ಎಂದು ಘೋಷಣೆ ಮಾಡುವಂತಿಲ್ಲ. ತನಿಖೆ ನಂತರ ಸತ್ಯ ಏನು ಅನ್ನೋದು ಹೊರಬರುತ್ತೆ. ದೂರುದಾರರ ದೂರಿನಲ್ಲಿನ ಹೇಳಿಕೆ ಪ್ರಕಾರ, ಇದು ನಾಲ್ಕೈದು ವರ್ಷದ ಹಿಂದಿನ ಘಟನೆ. ನಾಲ್ಕೈದು ವರ್ಷದ ಹಿಂದೆ ಜನತಾದಳ ಕಾಂಗ್ರೆಸ್ ಜೊತೆ ಇತ್ತು ಅನ್ನೋದು ಇವರು ಮರೆತಿದ್ದಾರೆ. ತನಿಖೆ ಆಗಲಿ, ಸತ್ಯ ಏನೆಂಬುದು ಹೊರಬರಲಿ ಎಂದು ಹೇಳಿದರು.
ಕಾಂಗ್ರೆಸ್‌ನವರಿಗೆ ಜಾಣಕುರುಡು ಜಾಣ ಕಿವುಡುಯಿದೆ. ಒಳ್ಳೆಯ ಸಂಗತಿ ಯಾವುದೂ ಕಾಂಗ್ರೆಸ್ ಕಣ್ಣಿಗೆ ಬೀಳಲ್ಲ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಸುಳ್ಳಿನಿಂದಲೇ ಕಾಂಗ್ರೆಸ್ ಬದುಕಿದೆ. ಕಾಂಗ್ರೆಸ್‌ಗೆ ಸುಳ್ಳೇ ಆಕ್ಸಿಜನ್ ಇದ್ದಂಗೆ. ಸುಳ್ಳು ಇಲ್ಲದಿದ್ದರೆ ಕಾಂಗ್ರೆಸ್ ಸತ್ತು ಹೋಗುತ್ತದೆ. ಸುಳ್ಳನ್ನೇ ಉಸಿರಾಗಿಸಿಕೊಂಡು ಅವರು ಬದುಕಿದ್ದಾರೆ ಎಂದು ಹರಿಹಾಯ್ದಿದರು.
ಸಚಿವ ಶಿವರಾಜ್ ತಂಗಡಿಗಿಗೆ ಪ್ರಜಾಪ್ರಭುತ್ವದ ಅರ್ಥ ಗೊತ್ತಿಲ್ಲ. ಮೋದಿ ಮೋದಿ ಅಂದೋರಿಗೆ ಕಪಾಳಕ್ಕೆ ಹೊಡೀರಿ ಅಂತಾರೆ. ತಂಗಡಿಗಿಗೆ ಒಂದೊಂದು ಸಲ ತಾನು ಕಿಮ್ ಜಾಂಗ್ ಅನ್ನಿಸಿಬಿಡುತ್ತೆ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು. ಇದನ್ನು ತಂಗಡಗಿ ಮರೆತು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.