ಬೆಂಗಳೂರು: 2024ರ ಲೋಕಸಭೆ ಚುನಾವಣೆ (Lok Sabha Election) ಎದುರಿಸಲು ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಬಹುತೇಕ ಸಜ್ಜಾಗಿದೆ. ಈಗಾಗಲೇ ಕಾಂಗ್ರೆಸ್ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಇನ್ನು ಕೇವಲ 4 ಕ್ಷೇತ್ರಗಳಲ್ಲಿ ಮಾತ್ರ ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿದೆ.
ರಾಜ್ಯದ ಬಳ್ಳಾರಿ, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಈ 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿದರೆ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದಂತಾಗುತ್ತದೆ.
ಬಳ್ಳಾರಿ, ಕೋಲಾರ, ಚಾಮರಾಜನಗರ 3 ಕ್ಷೇತ್ರದಲ್ಲಿ ಸಚಿವರ ಸ್ಪರ್ಧೆಗೆ ತಂತ್ರಗಾರಿಕೆ ರೂಪಿಸಿತ್ತು. ಆದರೆ ಮೂವರು ಸಚಿವರು ತಮ್ಮ ಸಂಬಂಧಿಕರಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದರು. ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಲು ಬಳ್ಳಾರಿಯ ಸಚಿವ ನಾಗೇಂದ್ರ, ಕೋಲಾರದಲ್ಲಿ ಸಚಿವ ಮುನಿಯಪ್ಪ, ಚಾಮರಾಜನಗರದಲ್ಲಿ ಹೆಚ್.ಸಿ.ಮಹದೇವಪ್ಪ ಪುತ್ರ ಸುನಿಲ್ ಬೋಸ್‌ಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ನಿಮ್ಮ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳದೆ ಟಿಕೆಟ್‌ಗೆ ಡಿಮ್ಯಾಂಡ್ ಮಾಡಿದರೆ ಒಪ್ಪಲ್ಲ ಎಂದು 3 ಕ್ಷೇತ್ರದ 3 ಸಚಿವರ ವಿರುದ್ಧ ಹೈಕಮಾಂಡ್ ಗರಂ ಆಗಿದೆ ಎನ್ನಲಾಗಿದೆ.
ಇನ್ನು ಚಿಕ್ಕಬಳ್ಳಾಪುರದಿಂದ ಅಭ್ಯರ್ಥಿಯಾಗಲು ರಕ್ಷಾ ರಾಮಯ್ಯ ಹಾಗೂ ಶಿವಶಂಕರ ರೆಡ್ಡಿ ನಡುವೆ ಪೈಪೋಟಿ ಇದ್ದು, ಇದರಿಂದಾಗಿಯೇ ಟಿಕೆಟ್ ಅಂತಿಮಗೊಳಿಸುವುದು ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.
ಇಂದು ಕಾಂಗ್ರೆಸ್ ಒಟ್ಟು 57 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 17 ಕರ್ನಾಟಕದ ಲೋಕಸಭಾ ಕ್ಷೇತ್ರಗಳು. ಆರಂಭದ ಪಟ್ಟಿಯಲ್ಲಿಯೇ ಕಾಂಗ್ರೆಸ್ ಹೈಕಮಾಂಡ್ 7 ಕ್ಷೇತ್ರಗಳ ಅಭ್ಯರ್ಥಿಯನ್ನು ಪ್ರಕಟಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಕರ್ನಾಟಕದ ಒಟ್ಟು 24 ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.