ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ಪರ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬ್ಯಾಟ್ ಬೀಸಿದ್ದಾರೆ.
ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಹೈಕಮಾಂಡ್ ನಿರ್ಧಾರ ಗೊತ್ತಾಗುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಅವರು, ಅಧ್ಯಕ್ಷ ಸ್ಥಾನವನ್ನು ಎಚ್.ಕೆ.ಪಾಟೀಲ್ ಅವರಿಗೆ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಂತೆ ಹಿರಿಯ ನಾಯಕರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಎಚ್.ಕೆ.ಪಾಟೀಲ್ ಅವರು ಸೂಕ್ತ ವ್ಯಕ್ತಿ, ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವುದು ಉತ್ತಮ ಎಂದು ಹೈಕಮಾಂಡ್ ಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಲಾಬಿ ನಡೆಸಿದ್ದಾರೆ.
Advertisement
Advertisement
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿರುವ ಅವರು, ಮುನಿಸಿಕೊಂಡಿರುವ ಲಿಂಗಾಯತರು ಕಾಂಗ್ರೆಸ್ ಪರವೇ ನಿಲ್ಲುತ್ತಾರೆ. ಬೇರೆ ಎಲ್ಲಿಯೂ ಹೋಗಲ್ಲ. ಎಲ್ಲ ಅರ್ಹತೆ ಹೊಂದಿರುವ ಎಚ್.ಕೆ.ಪಾಟೀಲ್ ಅವರು ಅಧ್ಯಕ್ಷರಾದರೆ ಪಕ್ಷಕ್ಕೆ ಒಳಿತಾಗುತ್ತದೆ ಎಂದು ಪಟ್ಟು ಹಿಡಿದಿದ್ದಾರೆ.
Advertisement
ಮುಂದಿನ ರಾಜಕೀಯ ಪರಿಸ್ಥಿತಿಯ ಮೇಲೆ ನಿಯಂತ್ರಣ ಹೇರಲು ಮಲ್ಲಿಕಾರ್ಜುನ ಖರ್ಗೆ ಅವರು ಎಚ್.ಕೆ.ಪಾಟೀಲ್ ಅವರನ್ನು ಬೆಂಬಲಿಸುತ್ತಿದ್ದಾರೆ. ಇವರಿಬ್ಬರ ಮಧ್ಯೆ ಆತ್ಮೀಯ ಸಂಬಂಧವಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗುವ ಅವಕಾಶವಿದ್ದರೆ ಎಚ್.ಕೆ.ಪಾಟೀಲರ ಮೂಲಕ ಪಡೆಯಬಹುದು ಎನ್ನುವ ಸೂತ್ರವನ್ನು ಮಲ್ಲಿಕಾರ್ಜುನ್ ಖರ್ಗೆ ಅವರು ಸಿದ್ಧ ಪಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.