ಬೆಂಗಳೂರು: ಕೇಸರಿ ಪಡೆಯ ಕೊನೆಯ ಪ್ರಯತ್ನವೂ ಕೈಗೂಡಲಿಲ್ಲ. ಅತೃಪ್ತರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಬಿಜೆಪಿ ಫೇಲ್ ಆಗಿದ್ದು, ಅತೃಪ್ತ ಶಾಸಕರೆಲ್ಲರೂ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ರೆಬೆಲ್ ನಾಯಕ ರಮೇಶ್ ಜಾರಕಿಹೊಳಿ, ಜೆಡಿಎಸ್ ಶಾಸಕ ನಾರಾಯಣಗೌಡ, ನಾಗೇಂದ್ರ, ಮಹೇಶ್ ಕುಮಟಳ್ಳಿ ಮತ್ತು ಉಮೇಶ್ ಜಾಧವ್ ಕೂಡ ಬೆಂಗಳೂರಿಗೆ ಮರಳಿದ್ದಾರೆ. ಹೀಗಾಗಿ ದೋಸ್ತಿಗಳ `ಅನರ್ಹ ಅಸ್ತ್ರ’ಕ್ಕೆ ಬೆದರಿ ಮುಂಬೈನಿಂದ ಬೆಂಗಳೂರಿಗೆ ಅತೃಪ್ತ ಶಾಸಕರು ವಾಪಸ್ ಬಂದಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಸದನಕ್ಕೆ ಹಾಜರಾಗೋ ಸಲುವಾಗಿ ಮುಂಬೈ ಖಾಲಿ ಮಾಡಿ ಬೆಂಗಳೂರಿಗೆ ಬಂದಿದ್ದಾರೆ ಎನ್ನಲಾಗುತ್ತಿದ್ದು, ಈ ಮೂಲಕ ಆಪರೇಷನ್ ಆಡಿಯೋ ಸ್ಫೋಟದ ಬೆನ್ನಲ್ಲೇ ಆಪರೇಷನ್ ಕಮಲ ಸಂಪೂರ್ಣ ಫ್ಲಾಪ್ ಆಗಿದೆ. ಇತ್ತ ಅನರ್ಹ ಅಸ್ತ್ರಕ್ಕೆ ಬೆದರಿ ಅತೃಪ್ತರು ಕಾಂಗ್ರೆಸ್‍ಗೆ ಯೂಟರ್ನ್ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ನನ್ನ ಮುಟ್ಟೋ ಧೈರ್ಯ ಬಿಜೆಪಿಗಿಲ್ಲ- ಶಾಸಕ ನಾರಾಯಣಗೌಡ
ಒಂದು ಮೂಲದ ಪ್ರಕಾರ ಬಂಡಾಯ ಶಾಸಕರು ಇಂದು ಕೂಡ ಸದನಕ್ಕೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಯಾಕಂದ್ರೆ ಹೇಗಿದ್ದರೂ ಅನರ್ಹತೆಗೆ ಶಿಫಾರಸ್ಸು ಮಾಡಲಾಗಿದೆ. ಸದನಕ್ಕೆ ಹಾಜರಾದರು ಒಂದೇ ಹಾಜರಾಗದಿದ್ದರೂ ಒಂದೇ ಎಂಬ ತೀರ್ಮಾನಕ್ಕೆ ನಾಲ್ವರು ಬಂಡಾಯ ಶಾಸಕರು ಬಂದಿದ್ದಾರೆ. ಆದ್ದರಿಂದ ಸದನಕ್ಕೆ ಬಂದು ಎಲ್ಲರ ಮುಂದೆ ಅವಮಾನಿತರಾಗುವ ಬದಲು ಬರದಿರುವುದೇ ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಇನ್ನೊಂದು ಕಡೆ ಎಸ್ ಐಟಿ ತನಿಖೆಯೆ ಆಗಬೇಕು ಎಂಬ ವಾದಕ್ಕೆ ಪುಷ್ಟಿ ಸಿಕ್ಕರೆ ಬಂಡಾಯ ಶಾಸಕರು ಸದನಕ್ಕೆ ಹಾಜರಾಗಿ ದೋಸ್ತಿಗಳಿಗೆ ಮುಜುಗರ ಉಂಟು ಮಾಡಬಹುದು ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಬಹುತೇಕ ಬಂಡಾಯ ಶಾಸಕರು ಇಂದಿನ ಸಭೆಗೆ ಗೈರಾಗುವ ಸಾಧ್ಯತೆಯು ಇದ್ದು ಶಾಸಕರ ನಡೆ ಏನು ಎಂಬ ಕುತೂಹಲ ಹಾಗೇ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv