ನವದೆಹಲಿ: ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವುದು ಪ್ರಜಾಪ್ರಭುತ್ವವನ್ನು ಉಳಿಸಲು ಅಲ್ಲ, ರಾಹುಲ್ ಗಾಂಧಿ ಅವರ 2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಉಳಿಸಲು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿಕೆ ನೀಡಿದ್ದಾರೆ.
ತಮ್ಮ ಭ್ರಷ್ಟಾಚಾರ ಬಯಲಿಗೆ ಬರುವ ಕಾರಣ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ತನಿಖಾ ಸಂಸ್ಥೆಯ ಮೇಲೆ ಒತ್ತಡ ಹೇರಲು ಬೀದಿಗಿಳಿದಿದ್ದಾರೆ. ಯಾರೂ ಕಾನೂನಿಗಿಂತ ಮೇಲಲ್ಲ, ರಾಹುಲ್ ಗಾಂಧಿ ಕೂಡ ಅಲ್ಲ. ಹಿಂದೆಂದೂ ರಾಜಕೀಯ ಕುಟುಂಬ ಅಕ್ರಮ ಸಂಪತ್ತನ್ನು ರಕ್ಷಿಸಲು ಇಂತಹ ಸುಲಿಗೆ ಮಾಡಲು ಯತ್ನಿಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಪೊಲೀಸರನ್ನು ನೋಡುತ್ತಲೇ ಎದ್ನೋ ಬಿದ್ನೋ ಓಟಕ್ಕಿತ್ತ ಶ್ರೀನಿವಾಸ್ ಬಿವಿ
ಪ್ರಕರಣದ ಬಗ್ಗೆ ವಿವರಿಸಿದ ಸ್ಮೃತಿ ಇರಾನಿ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್(ಎಜೆಎಲ್) ಎಂಬ ಕಂಪನಿಯನ್ನು 1930ರಲ್ಲಿ ಪತ್ರಿಕೆಯನ್ನು ಪ್ರಕಟಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಇದು 5,000 ಸ್ವಾತಂತ್ರ‍್ಯ ಹೋರಾಟಗಾರರನ್ನು ಷೇರುದಾರರನ್ನಾಗಿ ಹೊಂದಿತ್ತು. ಆದರೆ ಇದೀಗ ಕಂಪನಿ ಗಾಂಧಿ ಕುಟುಂಬದ ನಿಯಂತ್ರಣದಲ್ಲಿದೆ ಎಂದು ವಿವರಿಸಿದರು. ಇದನ್ನೂ ಓದಿ: ಪ್ರವಾದಿ ಅವಹೇಳನ – ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 400ಕ್ಕೂ ಹೆಚ್ಚು ಮಂದಿ ಬಂಧನ
ಕಂಪನಿಯ ಮಾಲೀಕತ್ವವನ್ನು ಒಂದು ಕುಟುಂಬಕ್ಕೆ ವರ್ಗಾಯಿಸಲಾಗಿದೆ. ಇದರಿಂದಾಗಿ ಅದು ಪತ್ರಿಕೆಗಳನ್ನು ಪ್ರಕಟಿಸುತ್ತಿಲ್ಲ. ಬದಲಿಗೆ ರಿಯಲ್ ಎಸ್ಟೇಟ್ ವ್ಯವಹಾರವಾಗಿದೆ ಎಂದು ಆರೋಪಿಸಿದರು.