-ಯಾವುದೇ ಸ್ಥಾನ ತೋರಿಸದೆ ಸಂಡೂರು ತಹಶೀಲ್ದಾರ್ ರಶ್ಮಿ ವರ್ಗಾವಣೆ
ಬೆಳಗಾವಿ: ಕಾಂಗ್ರೆಸ್ ಶಾಸಕ ತುಕಾರಾಮ್ ಅವರಿಗೆ ಸಂಡೂರು ತಾಲೂಕಿನ ತಹಶೀಲ್ದಾರ್ ಹೆಚ್.ಜಿ. ರಶ್ಮಿ ಅವಮಾನ ಮಾಡಿದ್ದು, ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
Advertisement
ಸಂಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ತುಕಾರಾಮ್ ಅವರು ತಹಶೀಲ್ದಾರ್ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಪ್ರಸ್ತಾಪ ಮಂಡನೆ ಮಾಡಿದರು. ತಹಶೀಲ್ದಾರ್ ಕಾಲೇಜಿನಲ್ಲಿ ಪಾರ್ಟಿ ಮಾಡುತ್ತಾರೆ. ಕರ್ತವ್ಯ ಲೋಪ ಹಾಗೂ ಭ್ರಷ್ಟಾಚಾರದ ಆರೋಪ ಅವರ ಮೇಲಿದೆ. ಹಳ್ಳಿಗಳಲ್ಲಿ ತಹಶೀಲ್ದಾರರು ಕೋಲು ಹಿಡಿದು ಗೂಂಡಾ ವರ್ತನೆ ಮಾಡುತ್ತಿದ್ದಾರೆ. ವಾಲ್ಮೀಕಿ ಜಯಂತಿ ದಿನ ಕಾರ್ಯಕ್ರಮದಲ್ಲಿ ನನ್ನ ಹೆಸರು ಆಹ್ವಾನ ಪತ್ರದಲ್ಲಿ ಹಾಕಿಲ್ಲ. ಈ ಮೂಲಕ ಅವಮಾನ ಮಾಡಿದ್ದಾರೆ ಎಂದು ತುಕಾರಾಮ್ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ರು. ಅಲ್ಲದೆ ಕೆಲವು ಚಿತ್ರಗಳನ್ನು ಪ್ರದರ್ಶಿಸಿದರು. ಇದನ್ನೂ ಓದಿ: ಪೊಲೀಸರಿಗೆ ಫ್ರೀ ಹ್ಯಾಂಡ್, ಮಂಗಳೂರಲ್ಲಿ ಕಾನೂನು ಸುವ್ಯವಸ್ಥೆ ಭಂಗ ಬಂದ್ರೆ ಕ್ರಮ: ಆರಗ ಜ್ಞಾನೇಂದ್ರ
Advertisement
Advertisement
ಇದಕ್ಕೆ ಧ್ವನಿ ಗೂಡಿಸಿದ ಕಾಂಗ್ರೆಸ್ ಶಾಸಕರು, ತಹಶೀಲ್ದಾರರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಇದು ಬಹಳ ಗಂಭೀರವಾದ ವಿಚಾರವಾಗಿದೆ. ತುಕಾರಾಮ್ ಪತ್ರದ ಮೇಲೆ ಕ್ರಮ ಕೈಗೊಳ್ಳಲು ಮಾಧುಸ್ವಾಮಿ ಸೂಚಿಸಿದ್ದಾರೆ. ಇದಾದ ಮೇಲೂ ಶಾಸಕರಿಗೆ ತಹಶೀಲ್ದಾರರು ಅವಮಾನ ಮಾಡುವುದು ನಿಂತಿಲ್ಲ. ಸಿಎಂ ಆದೇಶ ಇದ್ದರೂ ಇಲಾಖೆ ಅಧಿಕಾರಿಗಳು ತಹಶೀಲ್ದಾರರನ್ನು ವರ್ಗಾವಣೆ ಮಾಡಿಲ್ಲ. ಈ ವಿಚಾರವಾಗಿ ತೇಲಿಸುವ ಉತ್ತರ ಕೊಡಬಾರದು. ಅಧಿಕಾರಿಗಳು ನಿಮ್ಮ ಜಿಲ್ಲೆಯಲ್ಲಿ ಹೀಗೆ ಮಾತನಾಡಿದರೆ ಸುಮ್ಮನಿರುತ್ತಾರಾ ಎಂದು ಪ್ರಶ್ನಿಸಿದರು.
Advertisement
ಇದಕ್ಕೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಕೂಡಲೇ ವರ್ಗಾವಣೆ ಮಾಡಲು ಆದೇಶ ಮಾಡುತ್ತೇನೆ ಹಾಗೂ ತನಿಖೆಗೂ ಸೂಚನೆ ಕೊಡುತ್ತೇನೆ ಎಂದರು. ಇದನ್ನೂ ಓದಿ: ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ
ಆದರೆ ಇದಕ್ಕೆ ಒಪ್ಪದ ಸಿದ್ದರಾಮಯ್ಯ, ವರ್ಗಾವಣೆ ಮಾಡುವುದು ಶಿಕ್ಷೆ ಅಲ್ಲ. ಒಬ್ಬ ಜುಜುಬಿ ತಹಶೀಲ್ದಾರ್ ಶಾಸಕರ ಬಗ್ಗೆ ಮಾತಾಡ್ತಾಳಾ..? ಮೊದಲು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು. ಹಿರಿಯ ಶಾಸಕರಿಗೆ ಅವಮಾನವಾದರೆ ಸಹಿಸಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ನಡೆಯನ್ನು ವಿರೋಧಿಸಿ ಬಾವಿಗಿಳಿದು ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ಅಮಾನತು ಸಾಧ್ಯವಿಲ್ಲ ಎಂದಾದರೆ ತಾನು ಹೆಲ್ಪ್ ಲೆಸ್ ಸಿಎಂ ಎಂದು ಒಪ್ಪಿಕೊಳ್ಳಲಿ ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು. ಈ ವೇಳೆ ಕಾಂಗ್ರೆಸ್ ಶಾಸಕರು ಕ್ರಮಕೈಗೊಳ್ಳಲೇ ಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಗುಡ್ಡಕ್ಕೆ ಶಕ್ತಿ ಹೊರುವ ತಾಕತ್ತು ಇದೆ ಬಿಡಿ – ಸೋಲಿನ ಆರೋಪಕ್ಕೆ ರಮೇಶ್ ಖಡಕ್ ಉತ್ತರ
ತಹಶೀಲ್ದಾರ್ ರಿಲೀವ್:
ಗದ್ದಲದ ಹಿನ್ನೆಲೆಯಲ್ಲಿ ಸದನವನ್ನು ಸ್ಪೀಕರ್ ಹತ್ತು ನಿಮಿಷಗಳ ಕಾಲ ಮುಂದೂಡಿ ಸಂಧಾನ ನಡೆಸಿದರು. ಮತ್ತೆ ಪುನಃ ಸದನ ಸೇರಿದಾಗಲೂ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲೇ ನಿಂತು ಪ್ರತಿಭಟನೆ ಮುಂದುವರೆಸಿದರು. ಈ ವೇಳೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಈಗಾಗಲೇ ಕರೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ. ತಕ್ಷಣದಿಂದ ಜಾರಿಗೆ ಬರುವಂತೆ ತಹಶೀಲ್ದಾರ್ ರಿಲೀವ್ ಮಾಡಿದ್ದೇವೆ. ಅವರಿಗೆ ಯಾವುದೇ ಸ್ಥಾನ ತೋರಿಸಲ್ಲ. ಒಂದು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುತ್ತೇವೆ ಎಂದರು. ಬಳಿಕ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ವಾಪಸ್ ತೆಗೆದುಕೊಂಡರು.
ಸ್ಪೀಕರ್ ಕಿವಿಮಾತು:
ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮೇಲ್ಮಟ್ಟದ ಅಧಿಕಾರಿಗಳು ತಳಮಟ್ಟದ ಅಧಿಕಾರಿಗಳಿಗೆ ತಿಳಿ ಹೇಳಬೇಕು. ಅಧಿಕಾರಿಗಳ ನಡವಳಿಕೆ ಕುರಿತಂತೆ ಕಾಲಕಾಲಕ್ಕೆ ತಕ್ಕಂತೆ ವರದಿಯನ್ನು ತರಿಸಿಕೊಂಡು ಸೂಕ್ತನಿರ್ದೇಶನಗಳನ್ನು ನೀಡಬೇಕು ಎಂದು ಮುಖ್ಯಕಾರ್ಯದರ್ಶಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.