ಚಿಕ್ಕಬಳ್ಳಾಪುರ: ಪೌರತ್ವ ಕಾಯಿದೆ ತಿದ್ದುಪಡಿ ಬೆಂಬಲಿಸಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಗೌರಿಬಿದನೂರು ನಗರದಲ್ಲಿ ಇಂದು ಬೃಹತ್ ಮೆರವಣಿಗೆ ನಡೆಸಲಾಯಿತು. ಭಾರತೀಯ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಆಯೋಜಿಸಿದ್ದ ಬೃಹತ್ ಮೆರವಣಿಗೆ ಗೌರಿಬಿದನೂರು ನಗರದ ನಾಗಪ್ಪ ಬ್ಲಾಕ್ ನಿಂದ ಆರಂಭದ ಮೆರವಣಿಗೆ ನಗರದ ಗಾಂಧಿ ವೃತ್ತದವರೆಗೂ ಸಾಗಿತ್ತು.
ಗಾಂಧಿ ವೃತ್ತದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸುಧಾಕರ್, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದೇಶದಲ್ಲಿ ಅಶಾಂತಿಯನ್ನ ಸೃಷ್ಟಿ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಮಾಡುತ್ತಿವೆ. ಕಾಂಗ್ರೆಸ್ ಲೋಕಸಭೆಯಲ್ಲಿ 450 ಸ್ಥಾನ ಪಡೆಯುತ್ತಿದ್ದವರು ಈಗ ಕೇವಲ 44-45 ಸ್ಥಾನಗಳಿಗೆ ಕುಸಿದು ನೆಲಕಚ್ಚಿದ್ದಾರೆ. ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಒಡಕು ಮೂಡಿಸಿ ವೋಟ್ ಬ್ಯಾಂಕ್ ಲಾಭ ಪಡೆದುಕೊಳ್ಳುವುದು ಕಾಂಗ್ರೆಸ್ 70 ವರ್ಷಗಳಲ್ಲಿ ಕಲಿತಿರುವ ವಿದ್ಯೆಯಾಗಿದೆ ಎಂದು ಕಿಡಿಕಾರಿದರು.
Advertisement
Advertisement
ಮಂಗಳೂರು ಗಲಭೆ ವಿಚಾರ ಪ್ರಸ್ತಾಪಿಸಿದ ಶಾಸಕರು, ನಮಗೆ ರಕ್ಷಣೆ ನೀಡಿರುವ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿಸುವುದು ಕಾಂಗ್ರೆಸ್ ಸಂಸ್ಕೃತಿ. ಭಾರತದ ಯಾವ ಒಬ್ಬ ಪ್ರಜೆಗೂ ಸಿಎಎ ಇಂದ ತೊಂದರೆ ಆಗುವುದಿಲ್ಲ. ಆದರೂ ಕಾಂಗ್ರೆಸ್ ನಾಯಕರು ಯಾಕೆ ಹೋರಾಟ ಮಾಡ್ತಿದ್ದಾರೆ. ಈ ದೇಶದಲ್ಲಿದ್ದು, ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸುವವರಿಗೆ ಇಲ್ಲಿ ಇರೋಕೆ ನಾವು ಬಿಡಬಾರದು. ಈ ದೇಶದಲ್ಲಿ ಹುಟ್ಟಿದ ಯಾವುದೇ ಪ್ರಜೆಗೂ ಸಿಎಎ ಇಂದ ತೊಂದರೆ ಆಗಲ್ಲ ಎಂದು ಸ್ಪಷ್ಟನೆ ನೀಡಿದರು.
Advertisement
ಮೆರವಣಿಗೆಯಲ್ಲಿ 1,500 ಅಡಿ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ ಮಾಡಲಾಯಿತು. 1,500 ಅಡಿ ಉದ್ದದ ರಾಷ್ಟ್ರಧ್ವಜ ಎಲ್ಲರ ಗಮನ ಸೆಳೆದಿದ್ದು, ಸಿಎಎ ಪರ ಘೋಷಣೆಗಳು ಮೊಳಗಿದವು.