ಧಾರವಾಡ: ಕಾಂಗ್ರೆಸ್ (Congress) ಪಕ್ಷ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕುಟುಕಿದ್ದಾರೆ.
ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸಂಪೂರ್ಣ ಸಾಯಬಾರದು ಅನ್ನೋ ಅಪೇಕ್ಷೆ ನಮಗೂ ಇದೆ. ಏಕೆಂದರೆ ವಿರೋಧ ಪಕ್ಷ ಇರಬೇಕು. ಆದರೆ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳೋಕೆ ಹೊರಟಿದ್ರೆ ದೇವರೂ ಕಾಪಾಡೋಕಾಗಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು
Advertisement
Advertisement
ರಾಹುಲ್ ಗಾಂಧಿ (Rahul Gandhi) ಯಾತ್ರೆಯಿಂದ ಬಿಜೆಪಿಗೆ (BJP) ನಡುಕ ಹುಟ್ಟಿದೆ ಎಂಬ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಎಲ್ಲೆಲ್ಲಿ ಚುನಾವಣೆ (Election) ಬರ್ತಾವೆ ಅಲ್ಲಲ್ಲಿ ರಾಹುಲ್ ಗಾಂಧಿಯನ್ನ ಕಳಿಸಿಕೊಡುವಂತೆ ಖರ್ಗೆ ಹಾಗೂ ಕಾಂಗ್ರೆಸ್ ಮುಖಂಡರಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ. ಏಕೆಂದರೆ ರಾಹುಲ್ ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತೆ. ಅವರು ಓಡಾಡಿದಷ್ಟು ಬಿಜೆಪಿಗೇ ಲಾಭ ಎಂದು ಹೇಳಿದ್ದಾರೆ.
Advertisement
Advertisement
ಖರ್ಗೆ ಎಐಸಿಸಿ ಅಧ್ಯಕ್ಷರಾದರೇ (AICC President) ಕಾಂಗ್ರೆಸ್‌ನಲ್ಲಿ ಬದಲಾವಣೆ ಆಗಬಹುದೆಂಬ ವಿಚಾರವಾಗಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಪ್ರಧಾನಿ ಆದಾಗ ಏನಾದ್ರು ಬದಲಾವಣೆ ಆಯ್ತಾ? ರಿಮೋಟ್ ಕಂಟ್ರೋಲ್ ಅಧ್ಯಕ್ಷರು, ರಿಮೋಟ್ ಕಂಟ್ರೋಲ್ ಪ್ರಧಾನಿಗಳೇ ಇದ್ದರು. ಅವರು ಏನು ಮಾಡಬೇಕಾದರೂ, ಮನೆಯಿಂದ ಒಂದು ಹೆಜ್ಜೆ ಹೊರಗಿಡಬೇಕಾದ್ರು ಗಾಂಧಿ ಕುಟುಂಬ ಕೇಳಿ ಮಾಡಬೇಕು. ಅದನ್ನು ಶಶಿ ತರೂರ್ ಅವರೇ ಹೇಳಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ದೇವಿಗೆ ಅರ್ಪಿಸಿದ್ದ ಸೇಬು ಹಣ್ಣನ್ನು ತಿಂದಿದ್ದಕ್ಕೆ 6ರ ಬಾಲಕನನ್ನು ಥಳಿಸಿ ಕೊಲೆ
ಪಿಎಫ್‌ಐ ಮತ್ತು ಆರ್‌ಎಸ್‌ಎಸ್ ಒಂದೇ ನಾಣ್ಯದ ಎರಡು ಮುಖ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಮಾತನಾಡಿದ ಜೋಶಿ, ನೆಹರೂ ಕಾಲದಿಂದಲೂ ಕಾಂಗ್ರೆಸ್‌ಗೆ ತುಷ್ಟೀಕರಣದ ರಾಜಕಾರಣ ರೂಢಿಯಾಗಿಬಿಟ್ಟಿದೆ. ಇಂದಿರಾ ಗಾಂಧಿ ಕಾಲದಲ್ಲಿ ಪರಾಕಾಷ್ಠೆಗೆ ತಲುಪಿ, ಸೋನಿಯಾ ಗಾಂಧಿ ಕಾಲದಲ್ಲಿ ತುಷ್ಟೀಕರಣ ಆಕಾಶ ದಾಟಿ ಮೇಲೆ ಹೋಗಿದೆ. ಪಿಎಫ್‌ಐ ಬ್ಯಾನ್ ಮಾಡಿರುವುದು ಅವರಿಗೆ ವಿರೋಧ ಮಾಡಲು ಸಾಧ್ಯವಾಗುತ್ತಿಲ್ಲ. ವಿರೋಧ ಮಾಡಿದರೆ ಜನ ಸರಿಯಾದ ಪಾಠ ಕಲಿಸುತ್ತಾರೆ. ಅದಕ್ಕಾಗಿ ಆರ್‌ಎಸ್‌ಎಸ್ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ.ಕೆ.ಹರಿಪ್ರಸಾದ್ ಅವರಿಗೆ ಒಂದು ಮಾತು ಹೇಳ್ತೀನಿ. ಮನಮೋಹನ್ ಸಿಂಗ್, ಇಂದಿರಾಗಾಂಧಿ ಹಾಗೂ ನೆಹರೂ ಸರ್ಕಾರದಲ್ಲಿ ಆರ್‌ಎಸ್‌ಎಸ್ ಅನ್ನು ತುಳಿಯುವ ಕೆಲಸ ಮಾಡಿದ್ದರು. ಅದು ಸಾಧ್ಯವಾಗಲಿಲ್ಲ. ಇಂದು ಆರ್‌ಎಸ್‌ಎಸ್ ಶತಮಾನಕ್ಕೆ ತಲುಪುತ್ತಿದೆ. ನಾವೆಲ್ಲ ಆರ್‌ಎಸ್‌ಎಸ್‌ನವರು, ದೇಶದ ಪ್ರಮುಖ ಹುದ್ದೆಯಲ್ಲಿರುವವರು ಆರ್‌ಎಸ್‌ಎಸ್ ನವರು, ನೀವು ಏನು ಹೇಳಿದರೂ ಉಪಯೋಗವಿಲ್ಲ. ತುಷ್ಟೀಕರಣ ಮಾಡಿದ್ದರಿಂದ ವಿರೋಧ ಪಕ್ಷದಲ್ಲಿ ಕೂರುವ ಸ್ಥಿತಿಯಲ್ಲೂ ಇಲ್ಲ ಎಂದು ಟೀಕಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಿಮಗೆ ಒಂದು ಸೀಟ್ ಕೂಡ ಬಂದಿಲ್ಲ. ಉತ್ತರಾಖಂಡದಲ್ಲಿ ನಿಮ್ಮ ಪಾರ್ಟಿ ಎಲ್ಲಿದೆ ಎಂದು ಹುಡುಕಾಡಬೇಕಿದೆ. ಈಶಾನ್ಯದಲ್ಲಿ ನಿಮ್ಮ ಒಬ್ಬ ಸಂಸದರೂ ಇಲ್ಲ. ಈ ಸ್ಥಿತಿಗೆ ತಲುಪಿದ ಮೇಲೆ ನೆಹರೂ ಕುಟುಂಬ ಪ್ರಯತ್ನ ಮಾಡಿದರು ಏನೂ ಸಾಧ್ಯವಾಗಿಲ್ಲ. ಈಗ 40-50 ಸಂಸದರು ಇದ್ದೀರಿ, ರಾಜ್ಯಸಭೆಯಲ್ಲಿ ಸ್ಥಾನಕ್ಕೆ ಬಂದಿದ್ದೀರಿ. ದೇಶದ 2 ರಾಜ್ಯ ಬಿಟ್ಟರೆ ಬೇರೆಲ್ಲೂ ಇಲ್ಲ. ಈ ಬಾರಿ ಚುನಾವಣೆಯಲ್ಲಿ ಅದನ್ನೂ ಕಳೆದುಕೊಳ್ಳುತ್ತೀರಿ. ರಾಹುಲ್ ಗಾಂಧಿ ಯಾತ್ರೆಯಿಂದ ರಾಜಸ್ಥಾನವನ್ನೂ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಸ್ವಲ್ಪ ಸದ್ಬುದ್ಧಿ, ಸ್ವವಿವೇಚನೆ ಉಪಯೋಗ ಮಾಡಿಕೊಂಡರೆ ದೇವರು ಒಳ್ಳೆಯದು ಮಾಡುತ್ತಾನೆ ಎಂದು ವ್ಯಂಗ್ಯವಾಡಿದ್ದಾರೆ.