ಯಾದಗಿರಿ: ಕಾಂಗ್ರೆಸ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಗಿ ಉಳಿದಿಲ್ಲ. ಅದು ಪಾಕಿಸ್ತಾನದ ರಾಷ್ಟ್ರೀಯ ಕಾಂಗ್ರೆಸ್ ಆಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವ್ಯಂಗ್ಯವಾಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ದೇಶ ಬೇಕಾಗಿಲ್ಲ. ತಮ್ಮ ವೋಟ್ ಬ್ಯಾಂಕ್ ಗಾಗಿ ದೇಶ ಮಾರಾಟ ಮಾಡಿದ್ರು ಪರವಾಗಿಲ್ಲ ಎನ್ನುವ ಧೋರಣೆ ಮತ್ತು ಸಂಸ್ಕೃತಿ ಆ ಎರಡು ಪಕ್ಷಗಳದ್ದಾಗಿದೆ. ಎಸ್‍ಡಿಪಿಐ ಮತ್ತು ಐಎಸ್‍ಐ ಸಂಘಟನೆಗಳು ದೇಶ ಸೇವೆ ಮಾಡಲ್ಲ, ಅವರು ಪಾಕಿಸ್ತಾನದ ಏಜೆಂಟರ್ ಗಳು ಐಎಸ್‍ಐಗೆ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಇದೆ ಎಂದರು.
ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಸಿಎಂಗೆ ಕ್ಷೆಮೆ ಕೇಳಿದ ವಿಚಾರವಾಗಿ ಮಾತನಾಡಿದ ಶಾಸಕರು, ತಪ್ಪು ಮಾಡಿದವರು ಕ್ಷಮೆ ಕೋರುವುದು ಧರ್ಮ. ಆ ಕೆಲಸ ನಿರಾಣಿ ಮಾಡಿದ್ದಾರೆ. ಮಠಾಧೀಶರು ರಾಜಕೀಯದಲ್ಲಿ ಒತ್ತಡ ಹಾಕುವುದು ಸರಿಯಲ್ಲ. ಸಚಿವ ಸ್ಥಾನದ ಬಗ್ಗೆ ಒತ್ತಡ ಹಾಕುವದು ಅವರ ಕೆಲಸವಲ್ಲ. ಸ್ವಾಮೀಜಿಗಳದ್ದು ಧರ್ಮದ ಕೆಲಸ ಹಾಗೂ ಬಡಬಗ್ಗರ ಹಿತ ಕಾಪಾಡುವುದು. ಸ್ವಾಮೀಜಿಗಳು, ರಾಷ್ಟ್ರಪತಿಗಳು ತಪ್ಪು ಮಾಡಿದ್ರು ಅದು ತಪ್ಪೆ. ವಚನಾನಂದ ಸ್ವಾಮೀಜಿ ತಮ್ಮ ಹೇಳಿಕೆ ಸಮರ್ಥಿಕೊಂಡಿದ್ದನ್ನು ಸಮಾಜ ಒಪ್ಪುವುದಿಲ್ಲ. ವಚನಾನಂದ ಸ್ವಾಮಿ ಇನ್ನಾದ್ರು ಸುಧಾರಣೆಯಾಗಿ, ತಮ್ಮ ಕಾರ್ಯವೈಖರಿ ಬದಲಾವಣೆ ಮಾಡದಿದ್ದರೆ ಅದರ ಪರಿಣಾಮ ಎರಡ್ಮೂರು ತಿಂಗಳಲ್ಲಿ ಎದುರಿಸಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ್ರು.