ಚಿಕ್ಕಬಳ್ಳಾಪುರ: ಸಾಮೂಹಿಕ ವಿವಾಹ (Mass Marriage) ಅಂದ್ರೆ ಸಾಮಾನ್ಯವಾಗಿ ನವಜೋಡಿಗಳಿಗೆ ಬಟ್ಟೆ, ಆಭರಣ ಸೇರಿದಂತೆ ವಿವಿಧ ಉಡುಗೊರೆಗಳನ್ನು ನೀಡಲಾಗುತ್ತದೆ. ಆದರೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಬಾಗೇಪಲ್ಲಿಯಲ್ಲಿ (Bagepalli) ನಡೆದ ಸಾಮೂಹಿಕ ವಿವಾಹದಲ್ಲಿ ನೂತನ ದಂಪತಿಗಳಿಗೆ ನೀಡಿದ ಉಡುಗೊರೆ ಮಾತ್ರ ವಿಭಿನ್ನವಾಗಿತ್ತು. ಮದುವೆಯಾದ ಜೋಡಿಗಳಿಗೆ ಸೀಮೆ ಹಸುವನ್ನೇ (Cow) ಉಡುಗೊರೆಯಾಗಿ ನೀಡಲಾಗಿದೆ.
ಬಾಗೇಪಲ್ಲಿ ತಾಲೂಕಿನ ಗಡಿದಂ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಎಸ್.ಎನ್. ಚಾರಿಟೇಬಲ್ ಟ್ರಸ್ಟ್ ವತಿಯಿಂದ 23ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬರೋಬ್ಬರಿ 106 ಜೋಡಿಗಳು ಸಾಮೂಹಿಕ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನೂತನ ದಂಪತಿಗಳಿಗೆ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಸೀಮೆ ಹಸುವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: Nepal Flash Flood| 105 ಭಾರತೀಯರು ಸೇರಿ 400 ಮಂದಿ ನಾಪತ್ತೆ
ಸೀಮೆ ಹಸುವಿನ ಜೊತೆಗೆ 50 ಸಾವಿರ ರೂ. ನಗದು ಸಹಾಯ ನೀಡಲು ಮುಂದಾಗಿದ್ದಾರೆ. ಇನ್ನು ಸಾಮೂಹಿಕ ವಿವಾಹದ ಜೊತೆಗೆ ಶ್ರೀ ತಿರುಮಲ ತಿರುಪತಿ ದೇವಸ್ಥಾನದ ವತಿಯಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವವನ್ನೂ ಆಯೋಜಿಸಲಾಗಿತ್ತು. ಇದನ್ನೂ ಓದಿ: ಖೇಲೋ ಇಂಡಿಯಾ; ನಾಳೆ ವಿದ್ಯಾರ್ಥಿಗಳ ಜೊತೆ ಮೋದಿ ಸಂವಾದ
ಕಾರ್ಯಕ್ರಮಕ್ಕೆ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಂಸದ ಡಿ.ಕೆ. ಸುರೇಶ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಮಾಜಿ ಸಚಿವ ಶಿವಶಂಕರ ರೆಡ್ಡಿ, ಮಾಜಿ ಶಾಸಕ ಎನ್. ಸಂಪಂಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ನೂರಾರು ಜೋಡಿಗಳ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದ ಬಾಗೇಪಲ್ಲಿಯಲ್ಲಿ, ನವ ದಂಪತಿಗಳ ಬದುಕಿಗೆ ಆರ್ಥಿಕ ನೆರವಾಗಲಿ ಎಂಬ ಉದ್ದೇಶದಿಂದ ಸೀಮೆ ಹಸು ಹಾಗೂ ನಗದು ಉಡುಗೊರೆ ನೀಡಿರುವುದು ವಿಶೇಷವಾಗಿತ್ತು. ಇದನ್ನೂ ಓದಿ: ಈ ಬಾರಿಯ ದಸರಾದಲ್ಲಿ ಕಂಬಳ ಇರುತ್ತದೆ: ಯತೀಂದ್ರ
