ದಾವಣಗೆರೆ: ಸರ್ಕಾರದ ಎರಡು ವರ್ಷದ ಸಾಧನೆ ಎಂದು ಹೇಳುತ್ತಾರೆ, ಆದರೆ ಕೆಲವು ಸಚಿವರು ಏನೂ ಸಾಧನೆ ಮಾಡಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ (Shivaganga Basavaraju) ಅಸಮಾಧಾನ ಹೊರಹಾಕಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಸಂಪುಟ ಪುನಾರಚನೆ ವಿಚಾರದ ಬಗ್ಗೆ ಅವರು ಮಾತನಾಡಿ, ಹಳಬರ ಸಚಿವ ಸ್ಥಾನಕ್ಕೆ ಕೊಕ್ ಕೊಟ್ಟರೆ ಒಳ್ಳೆಯದು. ಹಳಬರು ಅಧಿಕಾರ ಅನುಭವಿಸಿ ಜಿಡ್ಡು ಹಿಡಿದು ಹೋಗಿದ್ದಾರೆ. ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ರೆ ಉತ್ತಮವಾಗಿ ಕೆಲಸ ಮಾಡುತ್ತಾರೆ. ನಾನು ಸನ್ಯಾಸಿ ಅಲ್ಲ, ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಏನು ಕೆಲಸ ಮಾಡ್ತಿನಿ ಎಂದು ಆರು ತಿಂಗಳ ಬಾಂಡ್ ಬೇಕಾದರೂ ಕೊಡ್ತಿನಿ. ಜಿಲ್ಲೆಯ ಹಿರಿಯ ರಾಜಕಾರಣಿ ಶಾಸಕ ಶಾಂತನಗೌಡ್ರಿಗೆ ಕೊಟ್ಟರೂ ನಾನು ಖುಷಿ ಪಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಇಡಿ ಸಾಂವಿಧಾನಿಕ ಸಂಸ್ಥೆ ಅಲ್ಲ, ಬಿಜೆಪಿ ಅಂಗಸಂಸ್ಥೆ: ಇಡಿ ದಾಳಿಗೆ ಹರಿಪ್ರಸಾದ್ ಆಕ್ಷೇಪ
ಒಂದು ಜಿಲ್ಲೆಗೆ ಎರಡು ಸಚಿವ ಸ್ಥಾನ ಕೊಡಬಾರದು ಅಂತ ಏನಾದರೂ ಇದೆಯೇ? ಹೈಕಮಾಂಡ್ ಈಗಿನ ಸಚಿವರ ರಿಪೋರ್ಟ್ ನೋಡಿ ಅವರನ್ನೆಲ್ಲ ಕೈ ಬಿಡಬೇಕು. ಸಂಪುಟದಲ್ಲಿ 8-10 ಜನರನ್ನ ಬಿಡಲಿ, ಹೊಸಬರಿಗೆ ಅವಕಾಶ ಕೊಡಲಿ. 5 ರಿಂದ 6 ಬಾರಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಅವರಿಗೂ ಸಿಗಲಿ. ಎರಡುವರೆ ವರ್ಷ ಅಧಿಕಾರ ಹಂಚಿಕೆ ವಿಚಾರ ಈಗ ಮಾತನಾಡೋದು ಬೇಡ. ಉತ್ತಮವಾದ ಮುಖ್ಯಮಂತ್ರಿಗಳು ಇದ್ದಾರೆ ಎಂದು ಹೇಳಿದ್ದಾರೆ.
ಮರು ಜಾತಿಗಣತಿ ಮಾಡಿದ್ರೆ ಸ್ವಾಗತ
ಮರು ಜಾತಿಗಣತಿ ವಿಚಾರವಾಗಿ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ಮಾತನಾಡುತ್ತೇನೆ. ಈ ಬಗ್ಗೆ ಸಿಎಂ ದೆಹಲಿಯಲ್ಲಿ ಮಾತಾಡಿದಂತೆ ಕಾಣುತ್ತದೆ. ಮರು ಜಾತಿಗಣತಿ ಮಾಡುವುದಾದರೆ ನಾನು ಆ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ. ಜಾತಿ ಗಣತಿ ವ್ಯವಸ್ಥಿತವಾಗಿ ಆಗಿಲ್ಲ ಎಂಬ ವಿಚಾರ ಹಿಂದಿನಿಂದಲೂ ಹೇಳುತ್ತಿದ್ದೇನೆ. ಹಳೆಯ ವರದಿಯಲ್ಲಿ 60 ಸಾವಿರ ಲಿಂಗಾಯತರು ಇದ್ದಾರೆ ಎಂಬ ವರದಿ ತಪ್ಪಾಗಿತ್ತು. ಮರು ಸಮೀಕ್ಷೆ ಮಾಡಲು ನಾನೇ ಮೊದಲಿಗ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಜಾಮೀನು – ಗಂಗಾವತಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ