ಹುಬ್ಬಳ್ಳಿ: ಕೆಲವು ಸಚಿವರು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುತ್ತಿದ್ದು, ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿ ಪದೇ ಪದೇ ಮಾತನಾಡುವುದರಿಂದ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು, ಇಲ್ಲವಾದರೆ ತಮ್ಮ ತಮ್ಮ ದಾರಿಯನ್ನು ನೋಡಿಕೊಳ್ಳುವುದು ಸೂಕ್ತ ಎಂದು ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಾಂಗ್ರೆಸ್ ಸಚಿವರ ವಿರುದ್ಧ ನೇರವಾಗಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಈ ರೀತಿ ಹೇಳಿಕೆ ನೀಡುವುದರಿಂದ ಸಿದ್ದರಾಮಯ್ಯನವರೇ ಕುಳಿತು ಮಾತನಾಡಿಸುತ್ತಿದ್ದಾರೆಂಬ ಭಾವನೆ ರಾಜ್ಯದ ಜನರಲ್ಲಿ ಮೂಡುತ್ತದೆ. ವಿನಾಕಾರಣ ಹೆಸರು ಹಾಳಾಗುತ್ತದೆ. ಆದ್ದರಿಂದ ಮೈತ್ರಿ ಧರ್ಮದ ಪಾಲನೆ ಮಾಡುವುದು ಎರಡೂ ಪಕ್ಷದ ಕರ್ತವ್ಯ. ಈ ರೀತಿ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಶಾಸಕರನ್ನು ಪ್ರಶ್ನಿಸಿದರು.
ಕಳೆದ ಮೂರು ತಿಂಗಳ ಹಿಂದೆಯೇ ಪುಟ್ಟರಂಗ ಶೆಟ್ಟಿ ಅವರು ಇದೇ ಹೇಳಿಕೆ ನೀಡಿದ ವೇಳೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ. ಇದು ಮುಂದುವರಿದ ಕಾರಣ ಸಿಎಂ ರಾಜೀನಾಮೆ ನೀಡುವ ಪ್ರಸಂಗ ಎದುರಾಗಿದೆ. ಸುಧಾರಣೆ ಆಗದೇ ಇದ್ದರೆ ಇನ್ನೆಷ್ಟು ದಿನ ದೋಸ್ತಿ ಸರ್ಕಾರ ಮುಂದುವರಿಯುತ್ತದೆ? ಇದಕ್ಕೆಲ್ಲಾ ಸಮನ್ವಯ ಸಮಿತಿಯಲ್ಲಿ ಬ್ರೇಕ್ ಹಾಕಬೇಕು. ಇಲ್ಲವಾದರೆ ತಮ್ಮ ತಮ್ಮ ದಾರಿಯನ್ನು ನೋಡಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರವನ್ನು ಆತುರವಾಗಿ ರಚನೆ ಮಾಡಲಾಯಿತು. ಇದಾದ ಕೆಲ ತಿಂಗಳಲ್ಲಿ ಆತೃಪ್ತಿ ಆರಂಭವಾಯಿತು. ಇತ್ತ ಆಪರೇಷನ್ ಕಮಲ, ಇನ್ನೊಂದು ಕಡೆ ಈ ರೀತಿಯ ಹೇಳಿಕೆಯಿಂದ ಸಿಎಂ ಹೇಗೆ ಕೆಲಸ ಮಾಡಬೇಕು. ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಸರಿಯಾದ ವಾತಾವರಣ ಇಲ್ಲ. ಈಗ ಬಜೆಟ್ ಮಂಡನೆ ಮಾಡಲು ಹೊರಟ್ಟಿದ್ದಾರೆ. ಇವರಿಗೆ ಮೈಂಡ್ ಫ್ರೀ ಇರಬೇಕು. ಇಂತಹ ಒತ್ತಡಗಳಲ್ಲಿ ಅವರು ಹೇಗೆ ಕೆಲಸ ಮಾಡಲು ಆಗುತ್ತದೆ? ಈ ಹಿಂದೆ ನಾನು ಕಾಂಗ್ರೆಸ್ ವಿರುದ್ಧ ಮಾತನಾಡಿದಾಗ, ನನಗೆ ಮಾತನಾಡಬೇಡ ಎಂದಿದ್ದಕ್ಕೆ ನಾನು ಸುಮ್ಮನೆ ಇದ್ದೆ. ಈಗ ಇವರು ಏನೂ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸರಿಯೋ? ತಪ್ಪೋ ಮೈತ್ರಿ ಮಾಡಿಕೊಂಡಿದ್ದೀರಿ. ಈಗ ಸರಿಯಾಗಿ ಆಡಳಿತ ಮಾಡದೇ ಇದ್ದರೆ ಇಬ್ಬರಿಗೂ ಕೆಟ್ಟ ಹೆಸರು ಬರುತ್ತದೆ. ಸಮನ್ವಯ ಸಮಿತಿ ಇದ್ದು ಇಲ್ಲದಂತಾಗಿದೆ. ಸಮನ್ವಯ ಸಮಿತಿಯಲ್ಲಿ ಏನೂ ತೀರ್ಮಾನ ಆಗುತ್ತೆ ಎಂಬುದು ಗೊತ್ತಾಗುತ್ತಿಲ್ಲ. ಸಮನ್ವಯ ಸಮಿತಿಯಲ್ಲಿ ಕೇವಲ ನಾಲ್ಕು ಜನ ಇದ್ದಾರೆ, ಅದರಲ್ಲಿ ಏಳೆಂಟು ಜನ ಆದರೂ ಇರಬೇಕು. ವಿರೋಧ ಪಕ್ಷದಿಂದ ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಎರಡೂ ಪಕ್ಷಗಳು ಮಾಡಬೇಕು. ಈ ರೀತಿಯಾಗಿ ತಡೆಯುವ ಕೆಲಸ ಮಾಡದೇ ಇದ್ದರೆ ಆಪರೇಷನ್ ಕಮಲ ಮಾಡುತ್ತಾರೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv