ಬೆಳಗಾವಿ: ಅಥಣಿ ಉಪ ಚುನಾವಣಾ ರಣಕಣದಲ್ಲಿ ಪ್ರಚಾರದ ಬಿಸಿ ಜೋರಾಗಿದ್ದು, ಮಹತ್ವದ ಬೆಳವಣಿಗೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಕಾಂಗ್ರೆಸ್‍ನ ಪವರ್ ಫುಲ್ ಶಾಸಕಿಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೋಕಾಕ್ ಬದಲಿಗೆ ಅಥಣಿ ಚುನಾವಣೆ ಪ್ರಚಾರಕ್ಕೆ ಕಾಲಿಟ್ಟಿದ್ದಾರೆ. ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ ಹಾಗೂ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಸಹೋದರರ ಸಮರದಿಂದ ದೂರ ಉಳಿಯುವ ಉದ್ದೇಶದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕ್ ಕ್ಷೇತ್ರದ ಪ್ರಚಾರ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ. ಹೀಗಾಗಿ ಅಥಣಿ ಕ್ಷೇತ್ರಕ್ಕೆ ಬಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆದರೆ ಊಹಾಪೋಹಗಳನ್ನು ತಳ್ಳಿಹಾಕಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಅಥಣಿ ಚುನಾವಣಾ ಉಸ್ತುವಾರಿ, ಮಾಜಿ ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕರು ಅಥಣಿಗೆ ಬರುವಂತೆ ತಿಳಿಸಿದ್ದರು. ಹೀಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗೋಕಾಕ್ ರಾಜಕೀಯದ ಬಗ್ಗೆ ಮಾತಾಡಲು ನಾನು ಚಿಕ್ಕವಳು. ಅಲ್ಲಿನ ರಾಜಕಾರಣವೇ ಬೇರೆ. ಅದರ ಬಗ್ಗೆ ಪಕ್ಷದ ಮುಖಂಡರು ಮಾತನಾಡುತ್ತಾರೆ ಎಂದು ಹೇಳಿದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಈ ಹೇಳಿಕೆ ನೋಡಿದರೆ, ಜಾರಕಿಹೊಳಿ ಬ್ರದರ್ಸ್ ಗೆ ಅವರು ಹೆದರಿದ್ರಾ ಎನ್ನುವ ಅನುಮಾನಗಳು ಮೂಡುತ್ತಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಥಣಿಗೆ ಎಂಟ್ರಿ ಕೊಡುತ್ತಿದ್ದಂತೆ ಪಟ್ಟಣದ ಹೊರವಲಯದಲ್ಲಿರುವ ಕಾಂಗ್ರೆಸ್ ಮುಖಂಡ ಅನಿಲ ಸುಣಧೋಳಿ ನಿವಾಸದಲ್ಲಿ ಪ್ರಚಾರ ಕಾರ್ಯತಂತ್ರ ರೂಪಿಸುವ ಸಭೆಯಲ್ಲಿ ಪಾಲ್ಗೊಂಡರು. ಈ ಮೂಲಕ ಯಾವ ರೀತಿಯ ಪ್ರಚಾರ ಮಾಡಬೇಕು ಎನ್ನುವ ಕುರಿತು ಸುಮಾರು ಒಂದೂವರೆ ಗಂಟೆ ಸಭೆ ನಡೆಸಿದರು.