– ಇಕ್ಬಾಲ್ ಹುಸೇನ್ ವಿರುದ್ದ ಲೋಕಾಯುಕ್ತಕ್ಕೆ ದೂರು
ರಾಮನಗರ: ರಾಜ್ಯದಲ್ಲಿ ವಕ್ಫ್ ಜಮೀನಿಗೆ ಸಂಬಂಧಪಟ್ಟಂತೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ಒಂದು ಕಡೆಯಾದರೆ ಮತ್ತೊಂದು ಕಡೆ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಇಡೀ ಗ್ರಾಮವನ್ನೇ ಖರೀದಿ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ.
ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಇಡೀ ಊರನ್ನೇ ಶಾಸಕರು ಖರೀದಿ ಮಾಡಿದ್ದಾರೆಂದು ಗ್ರಾಮಸ್ಥರು ಈಗ ಲೋಕಾಯುಕ್ತಕ್ಕೆ (Lokayukta) ದೂರು ನೀಡಿದ್ದಾರೆ.
ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ಬಂದು ದಶಕಗಳೇ ಕಳೆದಿವೆ. ಈ ಕಾಯ್ದೆಯನ್ನು ಜಾರಿ ಮಾಡಿ ಬಡಜನರಿಗೆ ಭೂಮಿ ಕೊಟ್ಟಿದ್ದೇವೆ ಎಂಬ ಹೆಗ್ಗಳಿಕೆಯನ್ನು ಕಾಂಗ್ರೆಸ್ (Congress) ಪಡೆದುಕೊಳ್ಳುತ್ತಿದೆ. ಆದರೆ ಕಾಂಗ್ರೆಸ್ ಶಾಸಕರೇ ಈ ಕಾಯ್ದೆಯನ್ನು ಉಲ್ಲಂಘನೆ ಮಾಡಿ ರೈತರ ಜಮೀನು ಕಬಳಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಕನಕಪುರ ತಾಲೂಕಿನ ಯಡಮಾರನಹಳ್ಳಿ ದಾಖಲೆಯ ಹೊಂಗಣಿದೊಡ್ಡಿ ಗ್ರಾಮದಲ್ಲಿನ ಸುಮಾರು 67 ಎಕರೆ 30 ಗುಂಟೆ ಜಮೀನನ್ನು ಇಕ್ಬಾಲ್ ಹುಸೇನ್ ತಮ್ಮ ಹೆಸರಿಗೆ ಮಾಡಿಕೊಂಡಿದ್ದು, ಗ್ರಾಮಸ್ಥರಲ್ಲಿ ಊರು ಒಕ್ಕಲೆಬ್ಬಿಸುವ ಆತಂಕ ಸೃಷ್ಠಿಯಾಗಿದೆ. ಕಳೆದ 50-60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು, ಜೀವನ ನಡೆಸುತ್ತಿದ್ದ ಇಡೀ ಊರನ್ನೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಖರೀದಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಸಕ ಇಕ್ಬಾಲ್ ಹುಸೇನ್ ಸೇರಿ 7 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ಗ್ರಾಮಸ್ಥರು ದೂರು ನೀಡಿದ್ದಾರೆ. ಕನಕಪುರ ತಾಲೂಕಿನ ವಿಎ, ಆರ್ ಐ, ಶಿರಸ್ತೇದಾರ್, ಹಾಲಿ ತಹಶಿಲ್ದಾರ್ ಹಾಗೂ ಹಿಂದಿನ ತಹಶಿಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಾವ್ಯಾರಿಗೂ ತೊಂದರೆ ಕೊಟ್ಟಿಲ್ಲ, ನಮ್ಮನ್ನ ಟಾರ್ಗೆಟ್ ಮಾಡ್ತಿದ್ದಾರೆ: ಪ್ರಮೋದಾ ದೇವಿ
ಕಳೆದ 60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ. ಮನೆ ಕಟ್ಟಲು ಜಾಗ ತೆಗೆದುಕೊಂಡಿದ್ದೇವೆ. ಇದೀಗ ಏಕಾಏಕಿ ಬಂದು ಈ ಜಾಗ ನಮ್ಮದು ಎಂದರೆ ಹೇಗೆ, ನಾವು ಈ ಬಗ್ಗೆ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದೇವೆ. ಕನಕಪುರದ ಕಂದಾಯ ಅಧಿಕಾರಿಗಳು ಶಾಮೀಲಾಗಿ ಈ ರೀತಿ ಮಾಡಿದ್ದಾರೆ, ಕನಕಪುರ, ಹಾರೋಹಳ್ಳಿಯಲ್ಲಿ ಇದ್ದಂತಹ ಭೂ ನ್ಯಾಯ ಮಂಡಲಿ ನ್ಯಾಯಾಲಯವನ್ನು ಬೇಕಂತಲೇ ಮುಚ್ಚಿಸಿದ್ದಾರೆ. ನಾವು ಬೆಂಗಳೂರಿನ ಭೂ ನ್ಯಾಯ ಮಂಡಲಿಯಲ್ಲಿ ಕೇಸ್ ದಾಖಲಿಸಿದ್ದೇವೆ. ಕೇಸ್ ಇತ್ಯರ್ಥ ಆಗದೇ ಶಾಸಕರು ಹೇಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ತಮ್ಮ ಮೇಲೆ ಬಂದಿರುವ ಭೂಕಬಳಿಕೆ ಆರೋಪ ಕುರಿತು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಕೂಡಾ ಪ್ರತಿಕ್ರಿಯೆ ನೀಡಿ ನಾನು ಖರೀದಿ ಮಾಡಿರುವ ಜಮೀನಿನಲ್ಲಿ ಗ್ರಾಮ ಇರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ನಾನು ಖರೀದಿ ಮಾಡಿದ ಜಮೀನಿನ ಸರ್ವೆನಂಬರ್ ಒಂದರಲ್ಲಿ ಗ್ರಾಮ ಇದೆ. ಆ ಗ್ರಾಮದ ಜನರಿಗೆ ಹಕ್ಕುಪತ್ರ ಇಲ್ಲ. ನಾನು ಖರೀದಿ ಮಾಡಿರುವ ಜಮೀನಿನಲ್ಲಿ ಆ ಗ್ರಾಮ ಇರುವ ಜಾಗವನ್ನು ಜನರಿಗೆ ಬಿಟ್ಟು ಕೊಡುತ್ತೇನೆ. ಈಗಾಗಲೇ ಅಧಿಕಾರಿಗಳಿಗೆ ಹಕ್ಕುಪತ್ರ ಮಾಡಿಕೊಡಲು ಹೇಳಿದ್ದೇನೆ. ಆದರೆ ನನ್ನ ವಿರುದ್ಧದ ಆರೋಪದಲ್ಲಿ ಸತ್ಯವಿಲ್ಲ. ಯಾರೋ ಸಂಘ ಕಟ್ಟಿಕೊಂಡು ಬಂದು ರೋಲ್ ಕಾಲ್ ಮಾಡುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲೇ ತನಿಖೆ ಆಗಲಿ ಎಂದಿದ್ದಾರೆ.