– ಚುನಾವಣೆವರೆಗೂ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡದಂತೆ ಡಿಕೆಶಿ ಕೈಮುಗಿದ್ರು
ರಾಮನಗರ: ಇಬ್ಬರು ಮೊಮ್ಮಕ್ಕಳಿಗೆ ಎರಡು ಸ್ಥಾನ ಕೊಟ್ಟಿದ್ದೀರಿ. ಆದರೆ ಈಗ ಬೇರೆಯವರದ್ದನ್ನು ಕಿತ್ತುಕೊಂಡು ತುಮಕೂರಿಗೆ ಬಂದಿದ್ದೀರಲ್ಲ ಇದು ಸರಿಯೇ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಾಲಿ ಸಂಸದರ ಮೇಲೆ ಆರೋಪಗಳಿದ್ದರೆ ಟಿಕೆಟ್ ನಿರಾಕರಿಸಬಹುದು. ಆದರೆ ಯಾವುದೇ ಆರೋಪಗಳಿಲ್ಲದ ಸಂಸದ ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದೇ ಇರುವುದು ಸರಿಯಲ್ಲ. ಎಲ್ಲರಂತೆ ಅವರು ಕೂಡ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ಯಾಕೆ ಹಾಗೂ ಯಾರಿಗಾಗಿ ಟಿಕೆಟ್ ತಪ್ಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಎಚ್.ಡಿ.ದೇವೇಗೌಡರು 2014ರ ಚುನಾವಣೆಯಲ್ಲಿ ಇದು ನನ್ನ ಕಡೆಯ ಚುನಾವಣೆ ಎಂದು ಹೇಳಿದ್ದರು. ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣನಿಗೆ ನಗು ನಗುತ್ತಾ ಬಿಟ್ಟುಕೊಡಲಿಲ್ಲ. ಕಣ್ಣೀರು ಹಾಕಿದರು. ಸಂಸತ್‍ಗೆ ಎಚ್.ಡಿ.ದೇವೇಗೌಡ ಅವರಿಗಿಂತ ಪ್ರಜ್ವಲ್ ಆಗಲಿ, ನಿಖಿಲ್ ಆಗಲಿ ಅನಿವಾರ್ಯವೇ..? ಯಾಕೆ ಅವರು ಮಂಡ್ಯ ಇಲ್ಲವೇ, ಹಾಸನದಿಂದ ಸ್ಪರ್ಧಿಸಬಾರದು ಎಂದು ತುಮಕೂರು ಕ್ಷೇತ್ರದ ಸ್ಪರ್ಧೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.
ತುಮಕೂರು ಕ್ಷೇತ್ರದಿಂದ ಎಚ್.ಡಿ.ದೇವೇಗೌಡ ಅವರ ಸ್ಪರ್ಧೆಯನ್ನು ನಾವು ಒಪ್ಪಿಕೊಳ್ಳಬೇಕಾ? ಇಲ್ಲವೇ ವಿರೋಧಿಸಬೇಕೇ? ನಾನು ಆತ್ಮವಂಚನೆ ಮಾಡಿಕೊಂಡು ಮಾತನಾಡುವುದಿಲ್ಲ. ರಾಷ್ಟ್ರಮಟ್ಟದ ರಾಜಕಾರಣಕ್ಕೆ ದೇವೇಗೌಡರು ಅನಿವಾರ್ಯ. ಹೀಗಾಗಿ ಒಬ್ಬ ಮೊಮ್ಮಗನಿಗೆ ಅನುಭವ ಬರಲಿ ಎಂದು ದೇವೇಗೌಡರು ತಿಳುವಳಿಕೆ ಹೇಳಿ, ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಹುದಿತ್ತು ಎಂದು ಸಿಎಂ ಲಿಂಗಣ್ಣ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ.ಎಂ.ಲಿಂಗಣ್ಣ ಅವರು, ದೋಸ್ತಿ ಬಗ್ಗೆ ಇರುವ ನನ್ನ ವಿರೋಧ ಎಲ್ಲಿಯವರೆಗೆ ಹೋಗಬಹುದು. ಆದರೆ ಸಚಿವ ಡಿ.ಕೆ.ಶಿವಕುಮಾರ್ ಅವರು ಲೋಕಸಭಾ ಚುನಾವಣೆ ಮುಗಿಯುವರೆಗೆ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡದಂತೆ ಕೈ ಮುಗಿದಿದ್ದಾರೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡುವುದನ್ನು ನಿಲ್ಲಿಸಿದ್ದೇನೆ ಎಂದರು.