ಬೆಂಗಳೂರು: 2008ರಲ್ಲಿ ಯಡಿಯೂರಪ್ಪನವರು ಸಿಎಂ ಆಗಿದ್ದ ವೇಳೆ ನಾನು ಲಿಂಗಾಯತ ಮುಖಂಡ ಅಂತಾ ಗೊತ್ತಿರಲಿಲ್ವಾ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
ಆಪರೇಷನ್ ಕಮಲದಡಿಯಲ್ಲಿ ನನ್ನನ್ನು ಸೇರಿ ಹಲವು ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಧರ್ಮ ಸೇರಿದಂತೆ ಎಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಸೆಳೆಯುವ ಪ್ರಯತ್ನ ಮಾಡಿತು. ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದ ವೇಳೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲು ಹಿಂದೇಟು ಹಾಕಿದ್ರು. ಚುನಾವಣೆ ವೇಳೆಯಲ್ಲಿ ನನ್ನ ಕ್ಷೇತ್ರಕ್ಕೆ ಆಗಮಿಸಿ ದೊಡ್ಡ ಸಮಾವೇಶಗಳನ್ನು ನಡೆಸುವಾಗ ಬಿ.ಸಿ.ಪಾಟೀಲ್ ಲಿಂಗಾಯತ ಎಂಬುವುದು ಗೊತ್ತಿರಲಿಲ್ವಾ ಎಂದು ಕಿಡಿ ಕಾರಿದ್ರು.
ವಿಧಾನಸಭೆಯಲ್ಲಿಯೇ ಯಡಿಯೂರಪ್ಪನವರು ನನ್ನನ್ನು ಸೇರಿದಂತೆ ಕೆಲವು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ನನ್ನ ಜೊತೆ ಯಡಿಯೂರಪ್ಪ, ಮುರಳೀಧರ ರಾವ್ ಮತ್ತು ಶ್ರೀರಾಮುಲು ಮಾತನಾಡಿದ್ದು ನಿಜ, ಎಲ್ಲರ ಧ್ವನಿಯೂ ಆಡಿಯೋ ಕ್ಲಿಪ್‍ಗಳಲ್ಲಿ ಸ್ಪಷ್ಟವಾಗಿದೆ. ರಾಜಕೀಯ ಪ್ರವೇಶಕ್ಕೂ ಮುನ್ನ ನಾನೊಬ್ಬ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದವನು ಎಂದು ಹೇಳಿದ್ರು.
ಸತತವಾಗಿ ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕನಾಗಿ ಗೆದ್ದು ಬಂದಿದ್ದೇನೆ. ಈ ಬಾರಿ ಹಾವೇರಿ ಜಿಲ್ಲೆಯಿಂದ ಕಾಂಗ್ರೆಸ್‍ನಿಂದ ನಾನೊಬ್ಬನೆ ಗೆಲುವು ಕಂಡಿದ್ದೇನೆ. ಸಹಜವಾಗಿ ಸಚಿವ ಸ್ಥಾನದ ನಿರೀಕ್ಷೆಗಳಿವೆ. ಎಲ್ಲವನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ರು.