ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಡಿ. 19ರಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ಅವಾಚ್ಯ ಶಬ್ದಗಳಿಂದ ಬಿಜೆಪಿ ನಾಯಕ ಸಿ.ಟಿ ರವಿ (CT Ravi) ನಿಂದಿಸಿದ ಆರೋಪ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಈ ನಡುವೆ ಸಿ.ಟಿ ರವಿ ಆ ಪದ ಬಳಸಿದ್ದಾರೆ ಎನ್ನಲಾದ ವೀಡಿಯೋವೊಂದನ್ನ ಲಕ್ಷ್ಮಿ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಪರಿಷತ್ ಕಲಾಪದ ವೇಳೆ ಸಿ.ಟಿ ರವಿ ಆ ಪದ ಬಳಸಿ ನಿಂದಿಸಿದ್ದಾರೆ ಎನ್ನಲಾದ ವೀಡಿಯೋವನ್ನ ಪ್ರಸಾರ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಸಿ.ಟಿ ರವಿ ಕ್ಷಮಿಸುವ ಪ್ರಮೇಯ ಇಲ್ಲ, ಈ ಲಕ್ಷ್ಮಿ ಹೆಬ್ಬಾಳ್ಕರ್ ಯಾವತ್ತಿಗೂ ಕ್ಷಮಿಸಲ್ಲ. ಅವರಿಗೆ ಶಿಕ್ಷೆ ಆಗುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಸಿಎಂ ಮತ್ತು ಸಭಾಪತಿ ಅವರು ತನಿಖೆ ಮಾಡಬೇಕು. ಆದಷ್ಟು ಬೇಗೆ ಎಫ್‌ಎಸ್‌ಎಲ್ ರಿಪೋರ್ಟ್ ತರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸುವರ್ಣಸೌಧದಲ್ಲಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ – ಹೆಬ್ಬಾಳ್ಕರ್ ಆಪ್ತ ಸೇರಿ 10 ಜನರ ವಿರುದ್ಧ FIR
ಸಿಟಿ ರವಿಯವರೇ ನನಗೆ ಆ ಪದ ಬಳಸಿದೀರಿ, ಇಂತಹ ನೂರು ಸಿ.ಟಿ ರವಿ ಬಂದ್ರೂ ನಾನು ಎದುರಿಸುತ್ತೇನೆ. ನನ್ನ ಬಳಿ ದಾಖಲೆ ಇವೆ, ಇಂದೇ ಬಿಡುಗಡೆ ಮಾಡ್ತೇನಿ. ನಿಮಗೆ ನಾಚಿಗೆ ಆಗಬೇಕು ಎನ್‌ಕೌಂಟರ್ ಅಂತೀರಾ? ಚಿಕ್ಕಮಗಳೂರಿಗೆ ಬಂದು ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ನೀವು ಅಂದ ಮಾತು ಅಂದ್ರೆ ಸುಮ್ಮನಿರ್ತೀರಾ? ಒಬ್ಬರೇ ಇದ್ದಾಗ ಕುಳಿತು ಯೋಚನೆ ಮಾಡಿ ಸಿಟಿ ರವಿ ಎಂದು ಹರಿಹಾಯ್ದರಲ್ಲದೇ, ಬಿಜೆಪಿಯಲ್ಲಿ ಯಾರಾದ್ರೂ ಒಬ್ಬರು ಕ್ಷಮೆ ಕೇಳಿದ್ರಾ? ಸಿ.ಟಿ ರವಿನ ಮೆರವಣಿಗೆ ಮಾಡ್ತಾರೆ, ಇದು ಸರೀನಾ ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರಿದು.. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ವಾ? ದೇವರ ಹತ್ರ ಹೋಗಿ ನಿಂತ್ಕೊಳ್ತಿರಿ, ಒಬ್ಬ ಹೆಣ್ಮಗಳಿಗೆ ಈ ರೀತಿ ಮಾತನಾಡಿ, ರಾಜಾರೋಷವಾಗಿ ಓಡಾಡ್ತಿದ್ದೀರಿ ನಿಮಗೆ ನಾಚಿಗೆ ಆಗಬೇಕು. ಇದನ್ನು ಸುಮ್ಮನೆ ಬಿಡಲ್ಲ, ಕಾನೂನು ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಪರವಾಗಿ ನಿಂತು ಎಲ್ಲರೂ ಧೃತರಾಷ್ಟ್ರರಾದ್ರು – ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣೀರು
ಮೋದಿ ಭೇಟಿಯಾಗ್ತೀನಿ:
ಪ್ರಧಾನಿ ಮೋದಿ, ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ಪ್ರಧಾನಿ ಮೋದಿಯವರನ್ನ ಭೇಟಿ ಆಗಿ ವಿಷಯ ತಿಳಿಸುತ್ತೇನೆ. ರಾಜಕಾರಣದಲ್ಲಿ ಹಿಂದಕ್ಕೆ ಸರಿಸಬೇಕು ಅಂತಾ ಮಾಡಿದ್ದಾರೆ. ನಾವು ಇದರಿಂದ ಮನೆಯಲ್ಲಿ ಕುಳಿತುಕೊಳ್ತೇವಿ ನೊಂದುಕೊಳ್ತೇವಿ ಅಂತ ಅಂದುಕೊಂಡಿದ್ರೆ ಈಗಲೇ ಬಿಟ್ಟುಬಿಡಿ ಎಂದು ತಿರುಗೇಟು ನೀಡಿದ್ದಾರೆ.
ನಮ್ಮ ಪಕ್ಷದ ಪ್ರತಿಯೊಬ್ಬರು ನಮ್ಮ ಜೊತೆಗಿದ್ದಾರೆ. ಪ್ರಿಯಾಂಕಾ ಗಾಂಧಿ ಅವರಿಂದ ಹಿಡಿದು ಎಲ್ಲರೂ ಫೋನ್ ಮಾಡಿ ಮಾತಾಡಿದ್ದಾರೆ. ಸಿಎಂ ಅವರು ನಿನ್ನೆ ಮೊನ್ನೆ ಕರೆ ಮಾಡಿ ನನ್ನ ಜೊತೆಗೆ ಮಾತಾಡಿದ್ದಾರೆ. ಈ ರಾಜ್ಯದ ಮಹಿಳೆಯರು ನನ್ನ ಜೊತೆಗೆ ಇದ್ದಾರೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಹೇಳಿಕೆ ಶಾಸಕಾಂಗ ವ್ಯವಸ್ಥೆಗೆ ದೊಡ್ಡ ಅವಮಾನ – ಡಿಕೆ ಶಿವಕುಮಾರ್