ಬೆಂಗಳೂರು: ರಾಜ್ಯದಲ್ಲಿ ದೋಸ್ತಿ ಸರ್ಕಾರ ಮುರಿದು ಬಿದ್ದ ಹಿನ್ನೆಲೆಯಲ್ಲಿ ಮತ್ತೆ ಮೈತ್ರಿ ಮುಂದುವರಿಯುತ್ತಾ? ಇಲ್ಲವೋ ಎನ್ನುವ ಪ್ರಶ್ನೆ ಎದ್ದಿದೆ.
ಮುಂದೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎರಡು ಪಕ್ಷಗಳ ನಾಯಕರು ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ಆರಂಭಿಸಿದ್ದು ಕೈ ನಾಯಕರ ಮಧ್ಯೆಯೇ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
Advertisement
Advertisement
ಕಾಂಗ್ರೆಸ್ ನಾಯಕರ ತೀರ್ಮಾನದ ಮೇಲೆ ಮೈತ್ರಿ ಬೇಕೇ? ಬೇಡವೇ ಎನ್ನುವ ನಿರ್ಧಾರಕ್ಕೆ ಜೆಡಿಎಸ್ ಬಂದಿದೆ ಎನ್ನುವ ವಿಚಾರ ಈಗ ಲಭ್ಯವಾಗಿದೆ. ಮಾಜಿ ಪ್ರಧಾನಿ ದೇವೇಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರ ಸಭೆ ನಡೆದರೆ, ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಇಂದು ಸಭೆ ನಡೆಯಿತು.
Advertisement
ಕಾಂಗ್ರೆಸ್ ಶಾಸಕರ ಪಕ್ಷದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪರಮೇಶ್ವರ್, ಡಿಕೆ ಶಿವಕುಮಾರ್, ಹೆಚ್‍ಕೆ ಪಾಟೀಲ್, ಕೆಜೆ ಜಾರ್ಜ್ ಸೇರಿದಂತೆ ಪ್ರಮುಖ ನಾಯಕರು, ಶಾಸಕರು ಭಾಗವಹಿಸಿದ್ದರು.
Advertisement
ಈ ಸಂದರ್ಭದಲ್ಲಿ ಮೈತ್ರಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದ್ದು, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಬಹುತೇಕ ನಾಯಕರು ಮೈತ್ರಿಯನ್ನು ಇಲ್ಲಿಗೆ ಅಂತ್ಯಗೊಳಿಸಲು ಒಲವು ತೋರಿದ್ದಾರೆ. ಆದರೆ ಪರಮೇಶ್ವರ್ ಹಾಗೂ ಡಿಕೆ ಶಿವಕುಮಾರ್ ಮುಂತಾದವರು ಮೈತ್ರಿ ಮುಂದುವರಿಸಲು ಒಲವು ತೋರಿದ್ದಾರೆ.
ಸಭೆಯಲ್ಲಿ ಮೈತ್ರಿ ಮುಂದುವರಿಯುವ ಅಥವಾ ಕಡಿದುಕೊಳ್ಳುವ ಕುರಿತು ಯಾವುದೇ ಸ್ವಷ್ಟ ನಿರ್ಧಾರ ಕೈಗೊಂಡಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಮೈತ್ರಿ ಆಗಿರುವುದರಿಂದ ನಾವು ನಿರ್ಧಾರ ಕೈಗೊಳ್ಳದೇ ಇರುವುದು ಒಳಿತು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲದೆ ಅವರೇ ಈ ಬಗ್ಗೆ ನಿರ್ಧಾರ ಮಾಡಲಿ ಎಂದು ಮೈತ್ರಿ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ ಎನ್ನಲಾಗಿದೆ.
ಎರಡು ಪಕ್ಷಗಳ ಸಭೆಯಲ್ಲಿ ಅತೃಪ್ತ ಶಾಸಕರ ವಿರುದ್ಧ ಅನರ್ಹತೆ ಮಾಡಲು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿದೆ. ಪಕ್ಷಾಂತರ ಮಾಡುವ ಶಾಸಕರಿಗೆ ಪಾಠವಾಗಬೇಕು, ಪಕ್ಷದಿಂದ ಗೆದ್ದು ಬಂದ ಮೇಲೆ ನಿಷ್ಠರಾಗಿ, ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದ್ದಾಗಿ ಸಿದ್ದರಾಮಯ್ಯ ಅವರು ನಾಯಕರಿಗೆ ತಿಳಿಸಿದ್ದಾರೆ.
ಇತ್ತ ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಗಟ್ಟಿಮಾಡಲು ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ಕಚೇರಿಯಲ್ಲಿ ಇಂದು ಸಭೆ ನಡೆಸಿ ಚರ್ಚೆ ನಡೆಸಲಾಗಿದೆ. ಪ್ರತಿಪಕ್ಷ ನಾಯಕರ ಆಯ್ಕೆ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದರು.