ಶಶಿ ತರೂರ್ ಅಪ್ರಬುದ್ಧ ರಾಜಕಾರಣಿ, ಯುಪಿಎ-2 ಅವಧಿಯ ಎಡವಟ್ಟುಗಳಿಗೆ ರಮೇಶ್ ಕಾರಣ: ಮೊಯ್ಲಿ

Public TV
2 Min Read
Veerappa Moily

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ನಾಯಕ ಮಧ್ಯೆ ವಾಗ್ದಾಳಿ ನಡೆದಿದ್ದು, ಪರಸ್ಪರ ಕೆಸರೆರಚಾಟ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟ್ ಬೀಸಿದ್ದ ಮಾಜಿ ಸಚಿವರಾದ ಜೈರಾಮ್ ರಮೇಶ್ ಹಾಗೂ ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಶಶಿ ತರೂರ್ ಅವರ ಬೆಂಬಲಕ್ಕೆ ನಿಂತು ಪ್ರಧಾನಿ ಮೋದಿ ಪರ ಕಾಂಗ್ರೆಸ್‍ನ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಬ್ಯಾಟ್ ಬೀಸಿದ್ದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವೀರಪ್ಪ ಮೊಯ್ಲಿ ಅವರು, ಯುಪಿಎ-2 ಅವಧಿಯ ನೀತಿ ನಿರೂಪಣೆಯ ಎಡವಟ್ಟುಗಳಿಗೆ ಜೈರಾಮ್ ಅವರೇ ಕಾರಣ. ಹಲವು ಸಂದರ್ಭದಲ್ಲಿ ಸರ್ಕಾರ ತನ್ನ ತತ್ವಗಳಲ್ಲಿ ರಾಜಿ ಮಾಡಿಕೊಳ್ಳಲು ಕಾರಣವಾದರು. ಈಗ ಪ್ರಧಾನಿ ಮೋದಿ ಪರ ಹೇಳಿಕೆ ಮೂಲಕ ಜೈರಾಮ್ ರಮೇಶ್ ಅವರು ಬಿಜೆಪಿ ಜೊತೆಯೂ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ. ಇದನ್ನೂ ಓದಿ: ಮಾನ ಮರ್ಯಾದೆ ಇದ್ರೆ ಕಾಂಗ್ರೆಸ್ ಕಚೇರಿಗೆ ಕಾಲಿಡ್ಬಾರ್ದು: ಮುನಿಯಪ್ಪ ಆಕ್ರೋಶ

ಶಶಿ ತರೂರ್ ಅವರು ಪ್ರಬುದ್ಧ ರಾಜಕಾರಣಿ ಎಂದು ನಾನು ಪರಿಗಣಿಸಿಲ್ಲ. ಮಾಧ್ಯಮಗಳಲ್ಲಿ ಗುರುತಿಸಿಕೊಳ್ಳಲು ಆಗಾಗ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಹೀಗಾಗಿ ಶಶಿ ತರೂರ್ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ. ಅವರು ಗಂಭೀರ ರಾಜಕಾರಣಿಯಾಗಬೇಕು ಎಂಬುದು ನಮ್ಮ ಪ್ರಾರ್ಥನೆ ಎಂದು ವ್ಯಂಗ್ಯವಾಡಿದ್ದಾರೆ.

ಜೈರಾಮ್ ರಮೇಶ್ ಹಾಗೂ ಶಶಿ ತರೂರ್ ಅವರ ಹೇಳಿಕೆ ದುರದೃಷ್ಟಕರ. ಅಷ್ಟೇ ಅಲ್ಲದೆ ಈ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ಹೈಕಮಾಂಡನ್ನು ಆಗ್ರಹಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ಅಸಮಾಧಾನ ಹೊರ ಹಾಕಿದ್ದಾರೆ.

ಈ ಹಿಂದೆ ಆಗಿದ್ದೇನು?:
ಸರಿಯಾದ ನಿರ್ಧಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಬೇಕು. ಇದರಿಂದ ಅವರ ಬಗೆಗಿನ ವಿರೋಧ ಪಕ್ಷಗಳ ಟೀಕೆಗಳಿಗೆ ಹೆಚ್ಚಿನ ವಿಶ್ವಾಸಾರ್ಹತೆ ಸಿಗುತ್ತದೆ ಎಂದು ಶಶಿ ತರೂರ್ ಹೇಳಿದ್ದರು. ಈ ಬೆನ್ನಲ್ಲೆ ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿದ ಜೈರಾಮ್ ರಮೇಶ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಮಾಡಿರುವ ಕೆಲಸಗಳನ್ನು ಗುರುತಿಸಬೇಕಾಗಿದೆ. ಈ ಬಗ್ಗೆ ಟೀಕೆ ಮಾಡುವ ಬದಲು ಅವುಗಳ ಅಧ್ಯಯನ ಮಾಡಬೇಕಾಗಿದೆ. ಅವರು ಜನರಿಗೆ ಹತ್ತಿರವಾಗುವ ಕೆಲಸ ಮಾಡಿದ್ದಾರೆ. ಹೀಗಾಗಿಯೇ 2019ರಲ್ಲಿ ಶೇಕಡ 30ರಷ್ಟು ಹೆಚ್ಚು ಮಂದಿ ಮೋದಿ ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದ್ದರು.

Jairam ramesh 1

ಪ್ರಧಾನಿ ಮೋದಿ ಅವರನ್ನು ಸದಾ ಟೀಕಿಸುತ್ತಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರು ಮಾಡಿರುವ ಕೆಲಸಗಳ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ. ಅಧ್ಯಯನ ಮಾಡಬೇಕಾಗಿದೆ. ಜನರನ್ನು ಸೆಳೆಯುವ ಕಲೆ ಮೋದಿ ಅವರಲ್ಲಿ ಮನೆ ಮಾಡಿದೆ. ಹೀಗಾಗಿ ಅವರನ್ನು ಜನ ವಿಶ್ವಾಸದಿಂದ ಕಾಣುತ್ತಾರೆ, ನಂಬುತ್ತಾರೆ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *