ನವದೆಹಲಿ: 10 ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಕ್ಕೆ ತೆರೆ ಬಿದ್ದಿದ್ದು ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್(V. D. Satheesan) ಆಯ್ಕೆಯಾಗಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ದೆಹಲಿಯಲ್ಲಿ ನಿರಂತರ ಸಭೆಗಳನ್ನು ನಡೆಸಿದ ಬಳಿಕ ವಿ.ಡಿ. ಸತೀಶನ್ ಹೆಸರನ್ನು ಅಂತಿಮಗೊಳಿಸಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ 102 ಸ್ಥಾನಗಳೊಂದಿಗೆ ಭರ್ಜರಿ ಬಹುಮತ ಪಡೆದಿದ್ದರೂ ಮುಖ್ಯಮಂತ್ರಿ ಆಯ್ಕೆ ಮಾಡಿರಲಿಲ್ಲ. ಸಿಎಂ ಗಾದಿಗಾಗಿ ಪಕ್ಷದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮ ನಿರ್ಧಾರ ಕೈಗೊಳ್ಳಲು ಭಾರೀ ಕಸರತ್ತು ನಡೆಸಿದ ಹೈಕಮಾಂಡ್ ಕೇರಳದ ಕೈ ನಾಯಕರ ಮಾತಿಗೆ ಬೆಲೆ ನೀಡಿ ವಿ.ಡಿ. ಸತೀಶನ್ ಅವರನ್ನೇ ಅಂತಿಮಗೊಳಿಸಿದೆ.
ಯುಡಿಎಫ್ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ವಿ.ಡಿ. ಸತೀಶನ್ ಅವರ ಆಯ್ಕೆಗೆ ಪ್ರಬಲ ಬೆಂಬಲ ವ್ಯಕ್ತಪಡಿಸಿತ್ತು.

ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆಸಿ ವೇಣುಗೋಪಾಲ್ (KC Venugopal) ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಶಾಸಕರ ಬೆಂಬಲ ಹಾಗೂ ಹೈಕಮಾಂಡ್ ಒಲವು ಇವರ ಪರ ಹೆಚ್ಚಾಗಿತ್ತು.
ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಎಲ್‌ಡಿಎಫ್ ಸರ್ಕಾರದ ವಿರುದ್ಧ ಮುಂಚೂಣಿಯಲ್ಲಿ ಹೋರಾಡಿದ್ದ ವಿ.ಡಿ. ಸತೀಶನ್ ತನಗೆ ಸಿಎಂ ಪಟ್ಟ ನೀಡದಿದ್ದರೆ ಬೇರೆ ಯಾವುದೇ ಸಚಿವ ಸ್ಥಾನ ಬೇಡ ಎಂಬ ಬಿಗಿ ನಿಲುವನ್ನು ತಳೆದಿದ್ದರು.
VIDEO | Delhi: “It has been decided to appoint V. D. Satheesan as the leader of the CLP”, says Congress leader Deepa Dasmunsi, during a press conference.
(Full video available on PTI Videos – https://t.co/n147TvrpG7) https://t.co/KxK4Mz0pmB pic.twitter.com/G3mcLs5Z7t
— Press Trust of India (@PTI_News) May 14, 2026
ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಇವರೂ ಸಹ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಶಾಸಕರ ಬೆಂಬಲ ವಿ.ಡಿ. ಸತೀಶನ್ ಮತ್ತು ಕೆಸಿ ವೇಣುಗೋಪಾಲ್ ಅವರಿಗೆ ಇದ್ದ ಕಾರಣ ಸಿಎಂ ರೇಸ್‌ನಲ್ಲಿ ಇವರು ಹಿಂದೆ ಸರಿದಿದ್ದರು.
ಮೂವರಲ್ಲಿ ಯಾರನ್ನೇ ಒಬ್ಬರನ್ನು ಆಯ್ಕೆ ಮಾಡಿದರೂ ಪಕ್ಷದಲ್ಲಿ ಬಣ ರಾಜಕೀಯ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸರ್ವಸಮ್ಮತ ಸೂತ್ರಕ್ಕಾಗಿ ಹೈಕಮಾಂಡ್ ಹೆಣಗಾಟ ನಡೆಸಿತ್ತು.
ಸಿಎಂ ಆಯ್ಕೆ ವಿಳಂಬವಾಗುತ್ತಿರುವುದಕ್ಕೆ ಬೇಸತ್ತು ವಯನಾಡ್ ಸೇರಿದಂತೆ ಹಲವು ಭಾಗಗಳಲ್ಲಿ ನಾಯಕರ ಪರ-ವಿರೋಧದ ಪೋಸ್ಟರ್‌ಗಳು ಪ್ರತ್ಯಕ್ಷವಾಗುವ ಮೂಲಕ ಕಾಂಗ್ರೆಸ್‌ನ ಒಳಜಗಳ ಬೀದಿಗೆ ಬಂದಿತ್ತು.

