ನವದೆಹಲಿ: ಕಾಂಗ್ರೆಸ್‍ನ ಬಹುದೊಡ್ಡ ಸಮಸ್ಯೆ ಪಕ್ಷದ ನಾಯಕ ರಾಹುಲ್ ಗಾಂಧಿ ಪಲಾಯನ ಮಾಡುತ್ತಿರುವುದು. ಅಲ್ಲದೆ, ಸೋನಿಯಾ ಗಾಂಧಿಯವರು ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲಿ ಹಾಗೂ ಪಕ್ಷದ ಕಾರ್ಯಚಟುವಟಿಕೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಶಿದ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಯಾಕೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇವೆ ಎಂಬುದನ್ನು ಚರ್ಚಿಸಲು ಸಹ ಯಾರೂ ಒಟ್ಟಿಗೆ ಸೇರಿಲ್ಲ. ನಮ್ಮ ನಾಯಕರು ಪಲಾಯನ ಮಾಡಿರುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ ಈ ವರೆಗೆ ಪಕ್ಷದ ಅಧ್ಯಕ್ಷರನ್ನು ನೇಮಿಸಿಲ್ಲ, ಬಹುಶಃ ಅಕ್ಟೋಬರ್‍ನಲ್ಲಿ ನಡೆಯುತ್ತಿರುವ ಕೆಲವು ರಾಜ್ಯಗಳ ಚುನಾವಣೆ ನಂತರ ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖುರ್ಶಿದ್ ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
Advertisement
ಸೋನಿಯಾಗಾಂಧಿಯವರು ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದರೂ ಸಹ ನಂತರ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಕುರಿತು ನಾವು ವಿಸ್ತೃತ ಚರ್ಚೆ ನಡೆಸಬೇಕಿತ್ತು. ಆದರೆ ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದರು ಎಂದು ಖುರ್ಶಿದ್ ಅಸಮಾಧಾನ ವ್ಯಕ್ತಪಡಿಸಿದರು.
Advertisement
ಸಂದರ್ಶನದಲ್ಲಿ ಕಾಂಗ್ರೆಸ್ ಸಮಸ್ಯೆಗಳ ಕುರಿತು ಮಾತನಾಡುವ ಮೂಲಕ ಖುರ್ಶಿದ್ ಅವರು ಅತ್ಯಂತ ಹಳೇಯ ಪಕ್ಷಕ್ಕೆ ಎದುರಾಗಿರುವ ಅಸ್ತಿತ್ವದ ಕುರಿತ ಬಿಕ್ಕಟ್ಟಿನ ಬಗ್ಗೆ ಇರುವ ಆತಂಕವನ್ನು ಇನ್ನೂ ದ್ವಿಗುಣಗೊಳಿಸಿದ್ದಾರೆ.
Advertisement
ನಮ್ಮ ಪಕ್ಷ ಇಂದು ಯಾವ ಮಟ್ಟದಲ್ಲಿದೆ ಎಂಬುದನ್ನು ನೆನೆದರೆ ತುಂಬಾ ನೋವಾಗುತ್ತದೆ, ಅಷ್ಟೇ ಕಾಳಜಿಯೂ ಇದೆ. ಏನೇ ಆಗಲಿ ನಾವು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಕೆಲವರು ಪಕ್ಷದಿಂದ ಎಲ್ಲವನ್ನೂ ಪಡೆದು ಇದೀಗ ಬೇರೆ ಪಕ್ಷಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪಕ್ಷಾಂತರವಾಗುತ್ತಿದ್ದಾರೆ ಎಂದು ಹರಿಹಾಯ್ದರು.
Salman Khurshid: This is perhaps the only time in history that a major defeat has not caused the party to lose confidence in their leader. If he had stayed&was around, we would've understood better the causes of our defeat & be better prepared to fight the battles in coming times pic.twitter.com/egG0rLnTIo
— ANI (@ANI) October 9, 2019
ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ರಾಹುಲ್ ಗಾಂಧಿ ಅವರಿಗೆ ಎಷ್ಟೇ ಕೇಳಿಕೊಂಡರೂ ಅವರು ಕೇಳಲಿಲ್ಲ. ಅವರೇನಾದರೂ ಅಧ್ಯಕ್ಷರಾಗಿ ಮುಂದುವರಿದಿದ್ದರೆ ಚುನಾವಣೆಯ ನಂತರದ ಮರಣೋತ್ತರ ಪರೀಕ್ಷೆಯನ್ನು ಸರಿಯಾಗಿ ನಡೆಸಬಹುದಿತ್ತು. ರಾಹುಲ್ ಗಾಂಧಿ ಈಗ ಪಕ್ಷದ ಅಧ್ಯಕ್ಷರಲ್ಲ. ಆದರೆ ಈಗಲೂ ಅವರು ನಮ್ಮ ಪಕ್ಷದ ಪ್ರಮುಖ ನಾಯಕರು. ಒಂದು ದೊಡ್ಡ ಸೋಲಿನಿಂದ ಪಕ್ಷದ ನಾಯಕನ ಮೇಲಿನ ವಿಶ್ವಾಸ ಕಳೆದುಕೊಳ್ಳಲು ಕಾರಣವಾದ ಪ್ರಕರಣ ಇತಿಹಾಸದಲ್ಲಿ ಇದೇ ಮೊದಲು. ಅವರು ಪಕ್ಷದಲ್ಲಿ ಉಳಿದುಕೊಂಡಿದ್ದರೆ, ಚರ್ಚಿಸಿ ನಮ್ಮ ಸೋಲಿನ ಕಾರಣಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದೆವು. ಮುಂಬರುವ ಚುನಾವಣೆಗಳನ್ನು ಎದುರಿಸಲು ಸನ್ನದ್ಧರಾಗುತ್ತಿದ್ದೆವು. ಇದೀಗ ಸೋನಿಯಾ ಗಾಂಧಿ ಅವರು ಶಾಶ್ವತ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಬೇಕು ಎಂದು ಒತ್ತಿ ಹೇಳಿದರು.
ನಮಗೆ ಬಹಳ ಕಡಿಮೆ ಸಮಯವಿದೆ. ಅಲ್ಲದೆ, ಪಕ್ಷವು ಕೆಲವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ನಮ್ಮ ನಾಯಕ ರಾಹುಲ್ ಗಾಂಧಿ ನಮ್ಮನ್ನು ತೊರೆದಿದ್ದರಿಂದ ನಿರ್ಧಾರ ಕೈಗೊಳ್ಳಲು ವಿಳಂಬವಾಗುತ್ತಿದೆ. ಅಧ್ಯಕ್ಷ ಸ್ಥಾನದಲ್ಲಿ ಅವರು ಇರಬೇಕೆಂಬುದು ನಮ್ಮ ಬಯಕೆಯಾಗಿದೆ ಎಂದು ತಿಳಿಸಿದರು.
66 ವರ್ಷದ ಖುರ್ಶಿದ್ ಅವರು ಉತ್ತರ ಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದು, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುಪಿಯ 80 ಸ್ಥಾನಗಳ ಪೈಕಿ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಜಯಗಳಿಸಿತ್ತು. ರಾಹುಲ್ ಗಾಂಧಿ ಸಹ ಅಮೆಥಿ ಕ್ಷೇತ್ರದಲ್ಲಿ ಸೋಲುಂಡಿದ್ದರು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸಿತ್ತು. ಆದರೂ ಸಹ ಕೇವಲ 52 ಸ್ಥಾನಗಳಲ್ಲಿ ಮಾತ್ರ ಜಯಗಳಿಸಲು ಸಾಧ್ಯವಾಗಿತ್ತು. ಬಿಜೆಪಿ 303 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿತ್ತು.