ಧಾರವಾಡ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಭಾಗವಹಿಸಿದ ನಂತರ ಮೌಲ್ವಿ ತನ್ವೀರ್ ಪೀರಾ (Tanveer Peer) ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬಹಳಷ್ಟು ಆರೋಪಗಳನ್ನು ಮಾಡಿದರು. ಈ ಆರೋಪಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಯತ್ನಾಳ್ ಆರೋಪಕ್ಕೆ ಕಾಂಗ್ರೆಸ್ ಮುಖಂಡರೊಬ್ಬರು ಫೋಟೋ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಫೋಟೋ ಬಿಡುಗಡೆ ಮಾಡಿ ತಿರುಗೇಟು ನೀಡಿರುವ ಧಾರವಾಡದ ಮುಸ್ಲಿಂ ಮುಖಂಡ ಇಸ್ಮಾಯಿಲ್ ತಮಟಗಾರ, ಶಾಸಕ ಯತ್ನಾಳ್ ಆರೋಪ ಮಾಡಿದ್ದ ಮೌಲ್ವಿ ತನ್ವೀರ್ ಪೀರಾ ಜೊತೆಯಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಇರುವ ಫೋಟೋ ಬಿಡುಗಡೆ ಮಾಡಿದ್ದಾರೆ.
ಫೋಟೋ ಬಿಡುಗಡೆ ಮಾಡಿ ಹೇಳಿಕೆ ನೀಡಿದ ಇಸ್ಮಾಯಿಲ್ ತಮಟಗಾರ, ಯತ್ನಾಳ್ ಅವರು ಒಂದು ಫೋಟೋ ಬಿಡುಗಡೆ ಮಾಡಿದ್ದಾರೆ, ಆ ಫೋಟೋಗಳನ್ನು ಈಗ ವೆಬ್‌ಸೈಟ್‌ನಿಂದ ತೆಗೆದಿದ್ದಾರೆ. ಅದೇ ವೆಬ್‌ಸೈಟ್‌ನಲ್ಲಿ ಬಿಜೆಪಿ ಮುಖಂಡರ ಫೋಟೋಗಳೂ ಇವೆ ಎಂದು ಹೇಳಿದರು. ಇದನ್ನೂ ಓದಿ: ಗಣ್ಯರ ಮಾಹಿತಿ ಮೊದಲೇ ಗೊತ್ತಿತ್ತು – ಸಿಎಂ ಭದ್ರತಾ ವಿಚಾರದಲ್ಲಿ ಎಡವಿದ್ರಾ ಧಾರವಾಡ ಪೊಲೀಸರು?
ಅದರಲ್ಲಿ ಗಡ್ಕರಿಯವರ ಫೋಟೋ ಸಹ ಇದೆ. ಇರಾಕ್‌ನಲ್ಲಿನ ಪ್ರಸಿದ್ಧ ದರ್ಗಾ ಅದು. ಆ ದರ್ಗಾದ ಮುಖ್ಯಸ್ಥರ ಜೊತೆ ಮೌಲ್ವಿ ತನ್ವೀರ್ ಪೀರಾ ಇರೋ ಫೋಟೋ ಇವೆ. ಅದೇ ಮುಖ್ಯಸ್ಥರನ್ನು ಗಡ್ಕರಿಯವರು ಈ ಹಿಂದೆ ಭೇಟಿಯಾಗಿದ್ದಾರೆ. ಆ ಭೇಟಿ ವೇಳೆಯ ಫೋಟೋ ಇದಾಗಿದೆ. ಈ ಫೋಟೋದಲ್ಲಿ ಇರಾಕ್ ರಾಷ್ಟ್ರಧ್ವಜವೂ ಇದೆ. ಅದು ಜಗತ್ಪ್ರಸಿದ್ಧ ದರ್ಗಾ. ಅಲ್ಲಿ ಜಗತ್ತಿನ ಅನೇಕರು ಹೋಗುತ್ತಾರೆ. ಅದನ್ನೇ ಇಟ್ಟುಕೊಂಡು ಯತ್ನಾಳ್ ಆರೋಪ ಮಾಡುತ್ತಿದ್ದಾರೆ ಎಂದರು.
ಯತ್ನಾಳರಿಗೆ ಧಾರವಾಡ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಇಲ್ಲವೇ ಇಲ್ಲಿನ ಹುಚ್ಚಾಸ್ಪತ್ರೆಯಿಂದ ಮಾತ್ರೆಯಾದರೂ ಒಯ್ದು ಕೊಡಬೇಕಿದೆ. ಇಲ್ಲಿ 50 ಕಿಮೀ ಸಮೀಪದ ಬೆಳಗಾವಿಗೆ ಅವರು ಬಂದಿದ್ದಾರೆ. ಹೀಗಾಗಿ ಧಾರವಾಡ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ ಎಂದು ಇಸ್ಮಾಯಿಲ್ ಯತ್ನಾಳ್ ಬಗ್ಗೆ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ನಾನು ರಾಜ್ಯಾಧ್ಯಕ್ಷನಾದ 20 ದಿನಗಳಲ್ಲಿಯೇ ಬದಲಾವಣೆ: ವಿಜಯೇಂದ್ರ