ನವದೆಹಲಿ: ಕಾಂಗ್ರೆಸ್ (Congress) ಮಾಜಿ ಶಾಸಕ ರಾಜೇಶ್ ಲಿಲೋಥಿಯಾ (Rajesh Lilothia) ಅವರ ಪತ್ನಿ ಕಾರು ಅಪಘಾತದಲ್ಲಿ ಸಾವಿಗೀಡಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮಾಜಿ ಶಾಸಕರ ಪತ್ನಿ ಪ್ರಯಾಣಿಸುತ್ತಿದ್ದ ಕಾರಿಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದು ಈ ದುರಂತ ನಡೆದಿದೆ.
ಉತ್ತರ ದೆಹಲಿಯ ಕಾಶ್ಮೀರ್ ಗೇಟ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಮಾಜಿ ಶಾಸಕ ರಾಜೇಶ್ ಪತ್ನಿ ಮಧು ಲಿಲೋಥಿಯಾ (55) ಮೃತಪಟ್ಟಿದ್ದಾರೆ. ಇದನ್ನೂ ಓದಿ: ಉರ್ದು ಭಾಷೆಯಲ್ಲಿ ದೇವರ ನಾಮಫಲಕ ಹಾಕಿದ್ದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ
ಅಪಘಾತದ ಬಳಿಕ ಎಸ್‌ಯುವಿ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿಯನ್ನು ಬಂಧಿಸಿ, ಅಜಾಗರೂಕತೆಯಿಂದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಸೀಲಾಂಪುರ ನಿವಾಸಿ ಜೈನುಲ್ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಎಸ್‌ಯುವಿ ನೋಂದಣಿ ಸಂಖ್ಯೆ ಮತ್ತು ಅದರ ಮಾಲೀಕರ ಮಾಹಿತಿಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಯಿತು ಎಂದು ಡಿಸಿಪಿ ಕಲ್ಸಿ ತಿಳಿಸಿದ್ದಾರೆ. ಇದನ್ನೂ ಓದಿ: ಹೆತ್ತ ತಾಯಿ ಕೊಂದು ಸೂಟ್‌ಕೇಸಲ್ಲಿ ಶವಹೊತ್ತು ಸ್ಟೇಷನ್‌ಗೆ ಬಂದ ಮಗಳು
ಆರೋಪಿ ಎಸ್‌ಯುವಿ ಚಾಲಕನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 279 (ಅತಿ ವೇಗದ ಚಾಲನೆ) ಮತ್ತು 304 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.