ಬೆಂಗಳೂರು: ಅದು 2019ರ ಲೋಕಸಭೆ (Lok Sabha) ಚುನಾವಣೆ ಸಂದರ್ಭ. ಆಗ ಕೋಲಾರದಲ್ಲಿ ತಾವು ಮಾಡಿದ ಭಾಷಣಕ್ಕೆ ಮಾನನಷ್ಟ ಮೊಕದ್ದಮೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸದ್ಯ ಸಂಸತ್ ಸದಸ್ಯತ್ವ ಸ್ಥಾನದಿಂದಲೇ ಅನರ್ಹಗೊಂಡಿದ್ದಾರೆ. ಈಗ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹೊತ್ತಿನಲ್ಲಿ ಅದೇ ಕೋಲಾರ ನೆಲದಿಂದಲೇ ಕಾಂಗ್ರೆಸ್ (Congress) ನಾಯಕರ ಜೊತೆಗೂಡಿ ‘ಸತ್ಯಮೇವ ಜಯತೆ’ ಹೋರಾಟ ಆರಂಭಿಸಲು ರಾಹುಲ್ ಗಾಂಧಿ ಬರುತ್ತಿದ್ದಾರೆ.
ತಾನು ಸಂಸದ ಸ್ಥಾನದಿಂದ ಅನರ್ಹಗೊಳ್ಳಲು ಕಾರಣವಾಗಿದ್ದ ನೆಲದಿಂದಲೇ ಈಗ ಮತ್ತೆ ಹೋರಾಟ ನಡೆಸಲು ರಾಹುಲ್ ಗಾಂಧಿ ಆಗಮಿಸುತ್ತಿದ್ದಾರೆ. “ಏ.5 ರಂದು ಕೋಲಾರಕ್ಕೆ ಬಂದು ಮಹಾತ್ಮ ಗಾಂಧೀಜಿ ಅವರ ಮೂಲ ಮಂತ್ರವಾದ ‘ಸತ್ಯಮೇವ ಜಯತೆ’ ಹೋರಾಟ ನಡೆಸಲಿದ್ದಾರೆಂದು” ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಸಾವರ್ಕರ್ ಅಲ್ಲ, ಕ್ಷಮೆ ಕೇಳುವುದಿಲ್ಲ: ಅನರ್ಹತೆ ಕುರಿತು ರಾಹುಲ್ ಗಾಂಧಿ
Advertisement
Advertisement
2019ರಲ್ಲಿ ಏನಾಗಿತ್ತು?
2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿದ್ದರು. “ಎಲ್ಲ ಕಳ್ಳರ ಉಪನಾಮ ಮೋದಿ ಎಂದೇ ಯಾಕಿರುತ್ತದೆ”? ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ವ್ಯಂಗ್ಯವಾಡಿದ್ದರು. ಈ ಸಂಬಂಧ ಸೂರತ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲಾಗಿತ್ತು. ಪ್ರಕರಣಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿತ್ತು. ಜತೆಗೆ ಶಿಕ್ಷೆಯನ್ನು 30 ದಿನಗಳ ಕಾಲ ಅಮಾನತಿನಲ್ಲಿರಿಸಿ, ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತ್ತು. ಇದರ ಬೆನ್ನಲ್ಲೇ ಮಾರ್ಚ್ 23ರಿಂದ ಅನ್ವಯವಾಗುವಂತೆ ರಾಹುಲ್ ಗಾಂಧಿಯವರ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಲಾಗಿದೆ.
Advertisement
ವಯನಾಡ್ ಕ್ಷೇತ್ರ ತೆರವು
ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದ ವಯನಾಡ್ ಕ್ಷೇತ್ರ ಸದ್ಯ ತೆರವಾಗಿದೆ. ಇನ್ನು 6 ತಿಂಗಳಲ್ಲಿ ಚುನಾವಣಾ ಆಯೋಗವು ಚುನಾವಣೆ ನಡೆಸಬೇಕಿದೆ. ಜೊತೆಗೆ ದೆಹಲಿಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಸರ್ಕಾರಿ ಬಂಗಲೆಯನ್ನು ಸಹ ರಾಹುಲ್ ಗಾಂಧಿ ತೊರೆಯಬೇಕಿದೆ. ಇದನ್ನೂ ಓದಿ: ತಿಂಗಳೊಳಗೆ ಸರ್ಕಾರಿ ಬಂಗಲೆ ತೊರೆಯುವಂತೆ ರಾಹುಲ್ ಗಾಂಧಿಗೆ ನೋಟಿಸ್
Advertisement
ಏ.5ಕ್ಕೆ ರಾಹುಲ್ ಮತ್ತೆ ಕೋಲಾರಕ್ಕೆ
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಅತ್ತ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಇದನ್ನು ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ನಾಯಕರು ಹಾಗೂ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿವೆ. ರಾಹುಲ್ ಗಾಂಧಿ ಅನರ್ಹತೆ ಸಂವಿಧಾನಬಾಹಿರ, ಪ್ರಜಾಪ್ರಭುತ್ವ ವಿರೋಧಿ ಹಾಗೂ ವಿಪಕ್ಷಗಳನ್ನು ಹತ್ತಿಕ್ಕುವ ಹುನ್ನಾರ ಎಂದು ಟೀಕಿಸಿವೆ. ಅಲ್ಲದೇ ಅನರ್ಹತೆ ಖಂಡಿಸಿ ದೇಶಾದ್ಯಂತ ಹೋರಾಟ ಕೂಡ ನಡೆಸಲಾಗುತ್ತಿದೆ. ಕರ್ನಾಟಕದಲ್ಲೂ ಕೋಲಾರದಿಂದಲೇ ‘ಸತ್ಯಮೇವ ಜಯತೆ’ ಹೆಸರಿನಲ್ಲಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಏ.5 ರಂದು ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಕರ್ನಾಟಕ ವಿಧಾನಸಭಾ ಚುನಾವಣಾ (Karnataka Vidhanasabha Election 2023) ದಿನಾಂಕವನ್ನು ಪ್ರಕಟಿಸಿದ್ದಾರೆ. ಏಪ್ರಿಲ್ 13ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಅಧಿಸೂಚನೆ ಪ್ರಕಟಿಸಲಿದ್ದಾರೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 21 ನಾಮಪತ್ರ ಪರಿಶೀಲನೆ ನಡೆಲಿದ್ದು, ಏಪ್ರಿಲ್ 24 ನಾಮಪತ್ರ ವಾಪಸ್ಸಿಗೆ ಕೊನೆಯ ದಿನವಾಗಿದೆ. ಮೇ 10ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಮೇ 13 ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ. ಅಲ್ಲದೇ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಇದನ್ನೂ ಓದಿ: ಧನ್ಯವಾದ, ಮನೆ ಖಾಲಿ ಮಾಡುವೆ – ಲೋಕಸಭೆಯ ವಸತಿ ಸಮಿತಿ ಪತ್ರಕ್ಕೆ ರಾಗಾ ಉತ್ತರ