ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಅತೃಪ್ತರೊಂದಿಗೆ ವಾಸ್ತವ್ಯ ಹೂಡಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಶಿರಸಿ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕರ ಕಚೇರಿಗೆ ತೆರಳಿ ಶಾಸಕರನ್ನು ಹುಡುಕಿಕೊಡುವಂತೆ ದೂರನ್ನು ದಾಖಲಿಸಿದ್ದಾರೆ.
ನಗರದ ಡಿವೈಎಸ್ಪಿ ಕಚೇರಿಗೆ ತೆರಳಿದ ಜಿಲ್ಲಾ ಕಾಂಗ್ರೆಸ್ ಭೀಮಣ್ಣ ನಾಯ್ಕ್ ಮತ್ತಿತ್ತರರು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಹುಡುಕಿಕೊಡುವಂತೆ ಡಿವೈಎಸ್ಪಿ ಜಿ.ಟಿ ನಾಯಕ ಅವರಿಗೆ ದೂರು ಸಲ್ಲಿಸಿದ್ದಾರೆ. ಕಳೆದ 10 ದಿನಗಳಿಂದ ಶಾಸಕರು ಕಾಣೆಯಾಗಿದ್ದು, ಶಾಸಕರು ಸಂಪರ್ಕಕ್ಕೂ ಸಿಕ್ಕಿಲ್ಲ. ಅಲ್ಲದೇ ಕ್ಷೇತ್ರದ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದಾರೆ. ಶಾಸಕರನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜನರು ಅಪಹರಣ ಮಾಡಿ ಅವರನ್ನು ಅಕ್ರಮವಾಗಿ ಹಾಗೂ ಬಲವಂತವಾಗಿ ಕೂಡಿ ಹಾಕಿರಬಹುದೆಂಬ ಸಂಶಯ ಬಲವಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಶಾಸಕರ ಕ್ಷೇತ್ರಕ್ಕೆ ಅತೀ ಅಗತ್ಯವಿರುವ ಕಾರಣ ದೂರನ್ನು ಸ್ವೀಕರಿಸಿದ ತಕ್ಷಣವೇ ಕಾರ್ಯಪ್ರವೃತ್ತರಾಗಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರರನ್ನು ಹುಡುಕಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಭೀಮಣ್ಣ ನಾಯ್ಕ, ರೈತರು, ಸಾರ್ವಜನಿಕರು ಸೇರಿದಂತೆ ಅನೇಕರು ಶಾಸಕರ ಕುರಿತಾಗಿ ಕೇಳಿಕೊಂಡು ಬರುತ್ತಿದ್ದಾರೆ. ಕಳೆದ ನಾಲ್ಕು ದಿನಗಳ ಮೊದಲು ಶಾಸಕರ ಮನೆಗೆ ತೆರಳಿದಾಗ ಅವರು ಇಲ್ಲದ ಕಾರಣ ಅವರನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದೇವೆ ಎಂದರು.
Advertisement
Advertisement
ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರನ್ನು ಹುಡುಕಿಕೊಡುವಂತೆ ಬುಧವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೇಶವರೆಡ್ಡಿ ದೂರು ನೀಡಿದ್ದರು. ಈ ಬಗ್ಗೆ ಕೇಶವರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಅವರು, 10 ದಿನದಿಂದ ಚಿಕ್ಕಬಳ್ಳಾಪುರ ಶಾಸಕರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕ್ಷೇತ್ರದಲ್ಲಿ ಬರಗಾಲದಿಂದ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಸುಧಾಕರ್ ಅವರು ಯಾರ ಸಂಪರ್ಕಕ್ಕೆ ಸಿಗದಿರುವ ಕಾರಣ ಹಾಗೂ ಜನರ ಸಮಸ್ಯೆಗೆ ಸ್ಪಂದಿಸದ್ದಕ್ಕೆ ಅವರನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದರು.