ಬೆಂಗಳೂರು: ಬಂಡಾಯ ಶಾಸಕರ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಮಾಧ್ಯಮಗಳ ವಿರುದ್ಧ ಗುಡುಗಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಅನಾರೋಗ್ಯದಿಂದ ಸಂಬಂಧಿಕರೊಬ್ಬರು ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ವಿಚಾರಿಸಲು ಆಗಮಿಸಿದ್ದ ಸ್ಪೀಕರ್ ಮಾಧ್ಯಮಗಳ ವಿರುದ್ಧ ಗರಂ ಆದರು.
ನೀವು ರಾಜೀನಾಮೆ ಅಂಗೀಕರಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನಿಸಿಗೆ ಕೋಪದಿಂದ ಪ್ರತಿಕ್ರಿಯೆ ನೀಡಿದ ಸ್ಪೀಕರ್, ಯೂ ಆರ್ ನಾಟ್ ಹ್ಯೂಮನ್ ಬೀಯಿಂಗ್? ನಿಮಗೆ ಮಾನವೀಯತೆ ಇಲ್ಲವೇ? ಗೆಟ್ ಔಟ್ ಫ್ರಂ ಹಿಯರ್. ಇಲ್ಲಿಂದ ನಡಿರೀ. ಆಸ್ಪತ್ರೆಯಲ್ಲಿ ಜನರು ಸಾಯುತ್ತಿದ್ದಾರೆ. ನಿಮಗೆ ಬೈಟ್ ಕೊಡಬೇಕಾ ಎಂದು ಕೆಂಡಾಮಂಡಲವಾದರು.
ಖಾಸಗಿ ಕಾರಿನಲ್ಲಿ ಪ್ರಯಾಣ:
ಜಯದೇವ ಆಸ್ಪತ್ರೆಯಿಂದ ಮಾಧ್ಯಮಗಳ ಕಣ್ಣು ತಪ್ಪಿಸಿದ ಸ್ಪೀಕರ್ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ಅಜ್ಞಾತ ಸ್ಥಳದತ್ತ ತೆರಳಿದ್ದಾರೆ. ಮುಂದಿನ ಗೇಟ್‍ನಲ್ಲಿ ತನಗಾಗಿ ಮಾಧ್ಯಮದವರು ಕಾಯುತ್ತಿದ್ದಾರೆ ಎನ್ನುವುದನ್ನು ತಿಳಿದು ಹಿಂದಿನ ಬಾಗಿಲಿನಿಂದ ಸ್ಪೀಕರ್ ತೆರಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಬಹು ದೊಡ್ಡ ಆಪರೇಷನ್ ಕಮಲ ನಡೆದಿದ್ದು, ಬರೋಬ್ಬರಿ 13 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಇನ್ನು ರಾಜೀನಾಮೆ ನೀಡುವವರ ಸಂಖ್ಯೆ ಏರಿಕೆ ಆಗುತ್ತಿದೆ. ಈ ಮೂಲಕ ಅಮೆರಿಕದಿಂದ ಬರುವ ಮೊದಲೇ ಸಿಎಂಗೆ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಬಂಡಾಯ ಶಾಸಕರ ನಡೆ ಭಾರೀ ಶಾಕ್ ಕೊಟ್ಟಿದೆ.