ಹುಬ್ಬಳ್ಳಿ: ಉಪ ಚುನಾವಣೆಯ ಬಳಿಕ ಬಿಜೆಪಿ ಕೈಯಿಂದ ಅಧಿಕಾರ ತಪ್ಪಿದರೆ ಜೆಡಿಎಸ್ ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚಿಸುವ ಸುಳಿವನ್ನು ಕಾಂಗ್ರೆಸ್ ನಾಯಕರು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್, ಉಪ ಚುನಾವಣೆಯ ಎಲ್ಲಾ 15 ಕ್ಷೇತ್ರಗಳ ಅಂಕಿ-ಅಂಶ ನೋಡಿದಾಗ ಕಾಂಗ್ರೆಸ್ ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸ ಮೂಡಿಸಿದೆ. ಚುನಾವಣೆ ಬಳಿಕ ಕಾಂಗ್ರೆಸ್ ಜೊತೆ ಜೆಡಿಎಸ್ ಮತ್ತೆ ಕೈಜೋಡಿಸಿದರೆ ಮೈತ್ರಿ ಅಧಿಕಾರಕ್ಕೆ ಬರಲಿದೆ. ಮೈತ್ರಿ ವಿಚಾರವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೊಂದಿಗೆ ಚರ್ಚೆಯಾಗಿದೆ. ಈ ಬಗ್ಗೆ ಅವರು ಕೂಡ ಒಲವು ತೋರಿಸಿದ್ದಾರೆ. ನಮ್ಮ ಹೈಕಮಾಂಡ್ ಒಪ್ಪಿಕೊಂಡರೆ ಮೈತ್ರಿಗೆ ನಾವು ಮತ್ತೆ ಸಿದ್ಧ ಎಂದು ತಿಳಿಸಿದರು.
Advertisement
Advertisement
ಬಿಜೆಪಿಯವರು ಕರ್ನಾಟಕ ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಮಾದರಿಯಾಗುತ್ತಿದ್ದಾರೆ. ಕರ್ನಾಟಕದಲ್ಲಿ ಮೈತ್ರಿ ಸರ್ಕಾರವನ್ನು ಕೆಡವಿ ಅಪವಿತ್ರ ಸರ್ಕಾರ ರಚಿಸಿದರು. ಇದೀಗ ಕಾಂಗ್ರೆಸ್ ಶಾಸಕರನ್ನು ತಮ್ಮತ್ತ ಸೆಳೆದು ಚುನಾವಣೆ ಎದುರಿಸುತ್ತಿದ್ದಾರೆ. ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
Advertisement
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೌಜನ್ಯವೇ ಇಲ್ಲ. ನೆರೆ ಸಂತ್ರಸ್ತರ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಸೌಜನ್ಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸದೇ ಸರ್ಕಾರ ಉಳಿಸಿಕೊಳ್ಳುವಲ್ಲಿ ಹೆಣಗಾಡುತ್ತಿದ್ದಾರೆ. ಗುಜರಾತ್ ಹಾಗೂ ಮಹಾರಾಷ್ಟ್ರದ ರೀತಿಯಲ್ಲಿ ಜನತೆ ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.
Advertisement
ಗ್ರಾಮೀಣಾಭಿದ್ಧಿ ಪಂಚಾಯತ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾತನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಅವರು ಈವರೆಗೂ ಹೇಳಿದಂತೆ ನಡೆದುಕೊಂಡಿದ್ದಾರಾ? ಕಾಂಗ್ರೆಸ್‍ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಎಲ್ಲವೂ ಸರಿ ಇದೆ. ನಮ್ಮಲ್ಲಿ ನಾಯಕತ್ವದ ಕೊರತೆ ಇಲ್ಲ. ಎಲ್ಲರೂ ಒಟ್ಟಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿಯವರು ಮಹಾತ್ಮಾ ಗಾಂಧೀಜಿ ಅವರನ್ನ ರಾಷ್ಟ್ರಪಿತ ಅಂತ ಒಪ್ಪಿಕೊಂಡಿಲ್ಲ. ಅದು ಮಾತೃಪಕ್ಷ ಅಲ್ಲ, ಪಿತೃ ಪಕ್ಷ. ಅವರ ನಡೆ, ಹೇಳಿಕೆಗಳು ಸಂಸ್ಕೃತಿಯನ್ನ ಎತ್ತಿ ತೋರಿಸುತ್ತಿದೆ. ನಾಗ್ಪುರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿ ಭಾವಚಿತ್ರ ಹಾಕಲಿ ನೋಡೋಣ ಎಂದು ಕಿಡಿಕಾರಿದರು.