ಧೈರ್ಯವಾಗಿರಿ, ನಿಮ್ಮ ಜೊತೆ ನಾವಿದ್ದೇವೆ: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಹೈಕಮಾಂಡ್

Public TV
2 Min Read
CMSiddaramaiah MudaCase Prosecution Congress

– ಸಿಎಂಗೆ ಕರೆ ಮಾಡಿ ಧೈರ್ಯ ಹೇಳಿದ ಸುರ್ಜೇವಾಲ, ಕೆಸಿ ವೇಣುಗೋಪಾಲ್

ಬೆಂಗಳೂರು: ಮುಡಾ ಕೇಸ್‌ಗೆ (MUDA Case) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‍ಗೆ (Prosecution) ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಹೈಕಮಾಂಡ್ ಸಿಎಂ ಬೆಂಬಲಕ್ಕೆ ನಿಂತಿದೆ.

ಸಿದ್ದರಾಮಯ್ಯಗೆ ಕಾಂಗ್ರೆಸ್ ನಾಯಕರಾದ ಸುರ್ಜೇವಾಲ ಹಾಗೂ ಕೆ.ಸಿ ವೇಣುಗೋಪಾಲ್ ಕರೆ ಮಾಡಿ ಅಭಯ ನೀಡಿದ್ದಾರೆ. ನೀವು ಧೈರ್ಯಗೆಡುವ ಅಗತ್ಯವಿಲ್ಲ. ಹೈಕಮಾಂಡ್ ನಿಮ್ಮೊಂದಿಗೆ ಇರಲಿದೆ. ಇಡೀ ಪಕ್ಷ ನಿಮ್ಮೊಂದಿಗೆ ನಿಲ್ಲಲಿದೆ. ಇಡೀ ಕ್ಯಾಬಿನೆಟ್ ಶಾಸಕರೆಲ್ಲ ನಿಮ್ಮ ಪರ ನಿಲ್ಲಲಿದ್ದಾರೆ. ಧೈರ್ಯದಿಂದ ಕಾನೂನು ಹೋರಾಟ ನಡೆಸಿ ಎಂದು ಸಿಎಂಗೆ ಧೈರ್ಯ ತುಂಬಿದ್ದಾರೆ.

ಕೆಪಿಸಿಸಿಗೆ ಎಐಸಿಸಿ ಸೂಚನೆ
ರಾಜ್ಯಪಾಲರು, ಕೇಂದ್ರದ ವಿರುದ್ಧ ಹೋರಾಟಕ್ಕೆ ಸಜ್ಜಾಗಲು ಎಐಸಿಸಿ ಪ್ರತಿಯೊಬ್ಬ ಸಚಿವರು, ಶಾಸಕರು ಹೇಳಿಕೆ ನೀಡಬೇಕೆಂದು ನಿರ್ದೇಶನ ನೀಡಿದೆ. ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಬೇಕು. ಕಾನೂನು ಹೋರಾಟ ಮಾಡೋಣ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆಗೆ ಎಐಸಿಸಿ ತಯಾರಿಲ್ಲ ಎಂದು ಸಂದೇಶವನ್ನು ರವಾನಿಸಿದೆ.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ
ಮುಡಾ ಅಕ್ರಮ ಕೇಸ್‍ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರಿಂದ ಅನುಮತಿ ದೊರೆತಿದೆ. ಅಬ್ರಹಾಂ ಎಂಬವರು ನೀಡಿದ್ದ ಖಾಸಗಿ ದೂರಿನ ಆಧಾರದಲ್ಲಿ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರು ರವಾನಿಸಿದ್ದಾರೆ.

ಸಿಎಂ ಕುಟುಂಬದ ಪ್ರಭಾವದ ಎರಡು ಅಂಶಗಳನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ, ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರಭಾವದ ಬಗ್ಗೆ ಉಲ್ಲೇಖವಾಗಿದೆ. ಸಿದ್ದರಾಮಯ್ಯ ಸಿಎಂ ಆಗುವ ತನಕ ಪಾರ್ವತಿ ಕಾದು, ಆ ಬಳಿಕ ಅರ್ಜಿ ಹಾಕಿದ್ದಾರೆ. 2010 ರಲ್ಲಿ ಪಾರ್ವತಿ ಜಮೀನು ಮಾಲೀಕರಾದರೂ ಪರಿಹಾರಕ್ಕೆ ಅರ್ಜಿ ಹಾಕಲು 4 ವರ್ಷ ಕಾಯುತ್ತಾರೆ. ಸಿದ್ದರಾಮಯ್ಯ ಸಿಎಂ ಆದ್ಮೇಲೆ 40:60 ಸೈಟ್ ಪರಿಹಾರ ಅನುಪಾತ, 50:50 ಆಯ್ತು. ಪಾಲಿಸಿ ಬದಲಾವಣೆಗೆ ಆಗಿನ ಸಿದ್ದರಾಮಯ್ಯ ಕ್ಯಾಬಿನೆಟ್ ಅನುಮತಿ ನೀಡಿತ್ತು. ಸಿದ್ದರಾಮಯ್ಯ ಪತ್ನಿ ಕೊಟ್ಟ ಅರ್ಜಿಯ ಆಧಾರದ ಮೇಲೆ ಪಾಲಿಸಿ ಬದಲಾವಣೆ ಮಾಡಿದ್ರು. ಆ ನಂತರ ಪರಿಹಾರ ನೀಡುವ ಸಂಬಂಧ ನಡೆದ ಮುಡಾ ಸಭೆಯಲ್ಲಿ ಶಾಸಕರಾಗಿದ್ದ ಯತೀಂದ್ರ ಇದ್ದರು ಎಂದು ಪ್ರಭಾವದ ಬಗ್ಗೆ ಉಲ್ಲೇಖಿಸಲಾಗಿದೆ.

Share This Article